Index   ವಚನ - 92    Search  
 
ಬಳಿಕ್ಕಮೀ ಚಕ್ರದ ಕರ್ಣಿಕಾಕ್ಷರಮಂ ನಿರವಿಸಿ, ಮತ್ತಂ, ಕೇಸರಾಕ್ಷರಗಳಂ ಪೇಳ್ವೆನೆಂತೆನೆ- ಕರ್ಣಿಕೆಯ ಪೂರ್ವ ದಕ್ಷಿಣ ಪಶ್ಚಿಮೋತ್ತರಂಗಳಲ್ಲಿ ನ್ಯಸ್ತವಾದ ಚತುರ್ದಳಾಕ್ಷರಂಗಳೊಳಗೆ ಮೊದಲ ಪೂರ್ವದಳದ ಬಿಂದುಮಯ ಸಕಾರಕ್ಕೆ ಆಧಾರವೆಂದು ಶಕ್ತಿಯೆಂದು ಕಾರ್ಯವೆಂದು ಪರವೆಂದು ಬಿಂದುವೆಂದೈದು ಪರ್ಯಾಯನಾಮಂಗಳ್. ಬಳಿಕ್ಕಂ, ದಕ್ಷಿಣದಳದಕಾರಕ್ಕೆ ಅಕಾರವೆಂದು ಆತ್ಮಬೀಜವೆಂದು ದೇಹಿಯೆಂದು ಕ್ಷೇತ್ರಜ್ಞನೆಂದು ಭೋಗಿಯೆಂದೈದು ಪರ್ಯಾಯನಾಮಂಗಳ್. ಮತ್ತಂ, ಪಶ್ಚಿಮದಳದ ನಾದಮಯವಾದೈಕಾರಕ್ಕೆ ಐಕಾರವೆಂದು ಶಿವಬೀಜವೆಂದಾಧೇಯವೆಂದು ಪರವೆಂದು ನಾದಾಂತವೆಂದೈದು ಪರ್ಯಾಯನಾಮಂಗಳ್. ಮರಲ್ದುಂ, ಬಡಗಣದಳದ ಕ್ಷಕಾರಕ್ಕೆ ವಿದ್ಯಾಬೀಜವೆಂದು ಕ್ಷಕಾರವೆಂದು ಕೂಟಾರ್ನವೆಂದು ವರ್ಗಾಂತವೆಂದು ದ್ರವ್ಯವೆಂದೈದು ಪರ್ಯಾಯನಾಮಂಗಳ್. ಇತ್ತೆರದಿಂ ಕೇಸರಾಕ್ಷರದ ಚತುರ್ದಳಾಕ್ಷರಂಗಳಂನಿರವಿಸಿದೆಯಯ್ಯಾ, ಪರಮ ಶಿವಲೀಂಗೇಶ್ವರ ಕಲ್ಯಾಣಗುಣಾಕರ.