Index   ವಚನ - 93    Search  
 
ಮತ್ತಂ, ಸಕೇಸರ ಕರ್ಣಿಕಾಕ್ಷರ ನಿರೂಪಣಾನಂತರದಲ್ಲಿ- ಯಗ್ನಿಮಂಡಲದ ಪೂರ್ವಾದೀಶಾನಾಂತವಾಗಿ ನ್ಯಸ್ತವಾದ ಸಕಾರಾದಿ ಮಕಾರಾಂತವಾದಷ್ಟದಳಾಕ್ಷರಂಗಳೊಳಗೆ ಮೊದಲ ಸಕಾರವೇ ಶಿವಮಂತ್ರೋದ್ಧರಣಕ್ಕೆ ಕಾರಣವಾದ ಶುಕ್ಲಧಾತುವೆಂದು ಪೆಸರನುಳ್ಳದು. ಮತ್ತಂ ಸ್ಥಿತಿಮಾರ್ಗದಿಂ ಶಿವಮಂತ್ರೋದ್ಧಾರಣಕ್ಕೆರಡನೆಯದಾದ ಷಕಾರವೆ ಸೂರ್ಯಪರ್ಯಾಯನಾಮದಿಂ ಮಜ್ಜಾಧಾತುವೆಸರನುಳ್ಳದು. ಮತ್ತಂ, ಮೂರನೆಯ ಯಥಾಕ್ರಮದ ಶಕಾರವೆ ಶ್ರೀಪರ್ಯಾಯ ನಾಮದಿಂದಸ್ಥಿ ಧಾತುವೆಸರನುಳ್ಳುದು. ಬಳಿಕ್ಕಂ, ನಾಲ್ಕನೆಯ ಕ್ರಮದ ವಕಾರವೆ ಸವರುಣಜಲ ಪರ್ಯಾಯನಾಮದಿಂದೆ, ಮೇಧೋಧಾತುವೆಸರನುಳ್ಳುದು. ಬಳಿಕ್ಕಂ, ಮೊದಲಂತೈದನೆಯದಾದ ಲಕಾರವೆ ಇಂದ್ರಿಯಬೀಜವಾಗಿ ಪೃಥ್ವಿಪರ್ಯಾಯನಾಮದಿಂ ಮಾಂಸಧಾತುವೆಸರನುಳ್ಳುದು. ಮರಲ್ದುಂ, ಪೂರ್ವದಂತಾರನೆಯ ಕ್ರೋಧಾಭಿಧರಕಾರವೆ. ಯಗ್ನಿ ಪರ್ಯಾಯನಾಮದಿಂ ರಕ್ತ ಧಾತುವೆಸರನುಳ್ಳುದು. ಮತ್ತೆಯುಂ, ಮುನ್ನಿನಂತೇಳನೆಯ ಯಕಾರವೆ ವಾಯುಬೀಜವೆನಿಸಿ ವಾಯುಪರ್ಯಾಯನಾಮದಿಂ ಸ್ನಾಯುಧಾತುವೆಸರನುಳ್ಳುದು. ಮೇಣಾದಿಯಂತೆಂಟನೆಯ ಮಕಾರವೆ ಕಾಲಮೃತ್ಯುವೆನಿಸಿ ಮೃತ್ಯುಕಾರಕವೆಂಬ ನಾಮವನುಳ್ಳುದಿಂತು ಸ್ಥಿತಿವರ್ಗದ ತ್ರಿಭೇದವನುಳ್ಳಗ್ನಿಮಂಡಲದ ನಿಲುಕಡೆಯಂ ನಿರೂಪಿಸಿದೆಯಯ್ಯಾ, ಪರಮ ಶಿವಲಿಂಗ ಸುರಗಂಗೋತ್ತಮಾಂಗ.