Index   ವಚನ - 120    Search  
 
ಮಂತ್ರೋತ್ಪತ್ತಿ ನಿರೂಪಣಾನಂತರದೊಳ್ತತ್ವಂಗಳಂ ಮಂತ್ರಂಗಳಂ ಲಿಂಗದಲ್ಲಿ ನ್ಯಾಸಮಂ ಮಾಳ್ಪುದಂ ಪೇಳ್ವೆನೆಂತೆನೆ- ಲಿಂಗಸ್ಥಾಪನ ಕಾಲದೊಳ್ಕಳಶಂಗಳಂ ಸ್ಥಾಪಿಸುತ್ತವರಲ್ಲಿ ಪೊರಗಣಿಂ ಲಿಂಗದೊಳೆಂತಂತಾ ಕಳಶಾಂತರ್ಗತವಾಗಿ ನಾದಮನುಂಟುಮಾಡಿ ಮಂತ್ರಂಗಳಂ ನ್ಯಾಸಂಗೆಯ್ವುದಾ ಲಿಂಗಸ್ಥಾಪನ ಕಳಶಸ್ಥಾಪನಂಗಳುಭಯದ ಕೂಟ ಕ್ರಿಯಾವಸ್ಥೆಯೆ ಪ್ರತಿಷ್ಠೆಯೆನಿಕುಮಾ ಪ್ರತಿಷ್ಠೆ ಪ್ರಾಣಮೆಂದು ಪ್ರಕೃತಿಯೆಂದಿರ್ತೆರವಾಯ್ತು. ಉಭಯದ ಯೋಗಮಂ ತಿಳಿದು ಸ್ಥಾನಮನೆಸಗುವುದು. ಮತ್ತಮಾ ಪ್ರಾಣಮೆನೆ ಮಂತ್ರಂ. ಪ್ರಕೃತಿಯೆನೆ ಮೂರ್ತಿ. ಈಯುಭಯದ ಯೋಗವೆ ಶಿವಸಾನ್ನಿಧ್ಯ ಕಾರಣಮದರತ್ತಣಿಂ ಮಂತ್ರಂಗಳಂ ಮೂರ್ತಿಗಳನುಂ ಲಿಂಗದಲ್ಲಿಯೆ ನ್ಯಾಸಂಗೆಯ್ವುದೆಂದು ತಿಳಿಪಿದೆಯಯ್ಯಾ, ಪರಶಿವಲಿಂಗಯ್ಯ.