Index   ವಚನ - 135    Search  
 
ಬಳಿಕ್ಕೆಯುಮಾ, ಪಿಂಡಬ್ರಹ್ಮಗಳ ಕಳಾಸ್ವರೂಪಮಂ ಪೇಳ್ವೆನೆಂತೆನೆ- ಶಂಖ ಕುಂದ ಚಂದ್ರ ಸ್ಫಟಿಕ ಕ್ಷೀರಗಳೆಂಬೀ ಪಂಚವರ್ಣಾತ್ಮಕವಾದುದೆ ಈಶಾನಮುಖದ ಕಲೆ. ಶೋಣ ಕೃಷ್ಣ ಶ್ವೇತ ಪೀತಂಗಳೆಂಬೀ ಚತುರ್ವ[ರ್ಣಾ]ತ್ಮಕವಾದುದೆ ತತ್ಪುರುಷಮುಖದ ಕಲೆ. ಅಂಜನಾರುಣ ಪೀತ ಶ್ಯಾಮ ನೀಲ ಸಿತಾರುಣ ಕಾಂಚನಂಗಳೆಂಬೀವೆಂಟು ವರ್ಣಾತ್ಮಕವಾದುದೆ ಆಘೋರಮುಖದ ಕಲೆ. ಜಪಾ ಪೀತಾಂಜನ ಶ್ಯಾಮ ಶುಕ್ಲ ಶಾಮಾಂಜನಾರುಣಾಂಜನ ಸ್ಫಟಿಕ ರಕ್ತನೀಲ ಮರಕತಂಗಳೆಂಬೀ ಪದಿಮೂರು ವರ್ಣಾತ್ಮಕವಾದುದೆ ವಾಮದೇವಮುಖದ ಕಲೆ. ರಕ್ತ ಕೃಷ್ಣ ನೀಲ ಕೃಷ್ಣ ಪೀತ ಕುಂಕುಮ ಭಿನ್ನಾಂಜನಾರುಣಂಗಳೆಂಬೀಯಷ್ಟಾತ್ಮಕವಾದುದೆ ಸದ್ಯೋಜಾತಮುಖದ ಕಲೆ. ಇಂತೀ ಮೂವತ್ತೆಂಟು ಕಲಾಮಯವಾದ ವರ್ನಂಗಳೆ ತ್ರಿನೇತ್ರಂಗಳಿಂ, ಚತುರ್ಭುಜಗಳಿನಭಯ ವರದ ಶೂಲ ಪರಶು ಕರಂಗಳಿಂ, ಸರ್ವಲಕ್ಷಣ ಸಂಯುತಂಗಳಿಂ, ಸರ್ವಾಭರಣಂಗಳಿಂ, ದಿವ್ಯಗಂಧ ಮಾಲ್ಯಂಗಳಿಂದಲಂಕೃತರಾದ ಶಿವಮೂರ್ತಿಗಳೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.