Index   ವಚನ - 8    Search  
 
ಎನ್ನ ಮೂವತ್ತಕ್ಷರ ಸ್ವರೂಪವನೊಳಕೊಂಡು ಆಚಾರಲಿಂಗವಾಗಿ ಎನ್ನ ಭಕ್ತಿಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಇಪ್ಪತ್ತೈದಕ್ಷರ ಸ್ವರೂಪವನೊಳಕೊಂಡು ಗುರುಲಿಂಗ ಸ್ವರೂಪಾಗಿ ಎನ್ನ ಮಾಹೇಶ್ವರಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಇಪ್ಪತ್ತಕ್ಷರ ಸ್ವರೂಪವನೊಳಕೊಂಡು ಶಿವಲಿಂಗ ಸ್ವರೂಪಾಗಿ ಎನ್ನ ಪ್ರಸಾದಿಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಹದಿನೈದಕ್ಷರ ಸ್ವರೂಪವನೊಳಕೊಂಡು ಜಂಗಮಲಿಂಗ ಸ್ವರೂಪಾಗಿ ಎನ್ನ ಪ್ರಾಣಲಿಂಗಿಸ್ಥಳದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ದಶಾಕ್ಷರ ಸ್ವರೂಪವನೊಳಕೊಂಡು ಪ್ರಸಾದಲಿಂಗ ಸ್ವರೂಪಾಗಿ ಎನ್ನ ಶರಣಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಏಕಾಕ್ಷರ ಸ್ವರೂಪವನೊಳಕೊಂಡು ಮಹಾಲಿಂಗ ಸ್ವರೂಪಾಗಿ ಎನ್ನ ಐಕ್ಯಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಇಂತೀ ನಾನಾವಿಧ ಪ್ರಕಾರವನೊಳಕೊಂಡ ಬಸವಣ್ಣನೆ ಇಷ್ಟಬ್ರಹ್ಮವೆನಗೆ. ಈ ಇಷ್ಟಬ್ರಹ್ಮವೆ ಎನ್ನ ಭಾವ ಮನ ದೃಕ್ಕಿನಲ್ಲಿ ತೊಳಗಿ ಬೆಳಗುತ್ತಿರ್ದ ಭೇದವನು ಸಿದ್ಧೇಶ್ವರನು ಅರುಹಿ ಕೊಟ್ಟ ಕಾರಣ ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗ ಪ್ರಭುವಿನಲ್ಲಿ ಸಿದ್ಧೇಶ್ವರನ ಕೃಪೆ ಎನಗೆ ಸಾಧ್ಯವಾಯಿತ್ತಯ್ಯ ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ.