Index   ವಚನ - 10    Search  
 
ಆಚಾರಭಕ್ತ ಎಪ್ಪತ್ತೆರಡು ಪ್ರಕಾರವನೊಳಕೊಂಡು ಆಚಾರಲಿಂಗವಾಗಿ ಎನ್ನ ಶ್ರದ್ಧೆಯಲ್ಲಿ ಸಂಗವಾದನಯ್ಯ ಬಸವಣ್ಣ. ಗೌರವ ಮಾಹೇಶ್ವರನು ಎಪ್ಪತ್ತೆರಡು ಪ್ರಕಾರವನೊಳಕೊಂಡು ಗುರುಲಿಂಗವಾಗಿ ಎನ್ನ ನೈಷ್ಠೆಯಲ್ಲಿ ಸಂಗವಾದನಯ್ಯ ಬಸವಣ್ಣ. ಲೈಂಗಿಪ್ರಸಾದಿ ಎಪ್ಪತ್ತೆರಡು ಪ್ರಕಾರವನೊಳಕೊಂಡು ಶಿವಲಿಂಗವಾಗಿ ಎನ್ನ ಸಾವಧಾನದಲ್ಲಿ ಸಂಗವಾದನಯ್ಯ ಬಸವಣ್ಣ. ಚರಪ್ರಾಣಲಿಂಗಿ ಎಪ್ಪತ್ತೆರಡು ಪ್ರಕಾರವನೊಳಕೊಂಡು ಜಂಗಮಲಿಂಗವಾಗಿ ಎನ್ನನುಭಾವದಲ್ಲಿಸಂಗವಾದನಯ್ಯ ಬಸವಣ್ಣ. ಪ್ರಸಾದಶರಣ ಎಪ್ಪತ್ತೆರಡು ಪ್ರಕಾರವನೊಳಕೊಂಡು ಪ್ರಸಾದಲಿಂಗವಾಗಿ ಎನ್ನಾನಂದದಲ್ಲಿ ಸಂಗವಾದನಯ್ಯ ಬಸವಣ್ಣ. ಮಹಾಘನಐಕ್ಯ ಎಪ್ಪತ್ತೆರಡು ಪ್ರಕಾರವನೊಳಕೊಂಡು ಮಹಾಲಿಂಗವಾಗಿ ಎನ್ನ ಸಮರಸದಲ್ಲಿ ಸಂಗವಾದನಯ್ಯ ಬಸವಣ್ಣ. ಆಚಾರ ಗೌರವ ಶ್ರದ್ಧೆ ನೈಷ್ಟೆ ಲಿಂಗದ ಪೀಠ. ಲೈಂಗಿ ಸಾವಧಾನ ಲಿಂಗದ ಮಧ್ಯಚರ. ಅನುಭಾವ ಲಿಂಗದ ಗೋಮುಖ. ಪ್ರಸಾದ ಆನಂದ ಲಿಂಗದ ವರ್ತುಳ. ಮಹಾಘನ ಸಮರಸಲಿಂಗದ ಗೋಳಕ. ಇಂತೀ ನಾನಾ ಪ್ರಕಾರವ ಸಿದ್ಧೇಶ್ವರ ಇಷ್ಟಲಿಂಗದಲ್ಲಿ ಅರುಹಿದನಾಗಿ ತತ್ವಮಸಿ ವಾಕ್ಯವೆಲ್ಲವೂ ನುಗ್ಗುನುಸಿಯಾಗಿ ಹೋದವು. ಸಚ್ಚಿದಾನಂದಬ್ರಹ್ಮ ತಾನಾಗಿ ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗ ಪ್ರಭುವಿನಲ್ಲಿ ನಾನು ಕೆಟ್ಟು ಬಟ್ಟಬಯಲಾಗಿ ಹೋದೆನಯ್ಯ ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ.