ಮರ್ತ್ಯದ ಬೀಜವ ಬಿತ್ತಿ ಕುಡಿಯೊಡೆಯದ ಮುನ್ನ
ಕತ್ತಲೆ ಬೆಳಗು ವಿಸ್ತರಿಸಿ ತೋರ್ಪುದರತ್ತಲೆ
ನಿನ್ನ ಚಿದಂಶಿಕನಪ್ಪ ಶರಣಂಗೆ
ಭೂತಳದ ಭೋಗವನೋತು ಬಳಸೆಂದು
ಪ್ರೀತಿಯಿಂದ ಕಲ್ಪಿಸಿಕೊಡುವರೆ ಅಯ್ಯ?
ರಾಜಹಂಸನಿಗೆ ಅಮೃತಾಹಾರವನಿಕ್ಕಬೇಕಲ್ಲದೆ
ಗರುತ್ಮನ ಆಹಾರವನಿಕ್ಕುವರೆ ಅಯ್ಯ?
ಅದೆಂತೆನಲು
ಅವನಿಯ ಭೋಗಕ್ಕೆ ಅತಿಮಿಗಿಲೆನಿಸಿಕೊಂಬುದು
ಮಜ್ಜನ ಭೋಜನ ಅನುಲೇಪನ
ಆಭರಣ ವಸ್ತ್ರ ತಾಂಬೂಲವಯ್ಯ.
ಇದಕ್ಕೆ ನೂರ್ಮಡಿ ಮಿಗಿಲೆನಿಸಿಕೊಂಬುದು
ಸುದತಿಯರ ಮೃದುನುಡಿ ತೆಕ್ಕೆ ಚುಂಬನ
ಸುರತಸಂಭ್ರಮದ ಲೀಲಾವಿನೋದವಯ್ಯ.
ಆ ಸರಸ ಲೀಲಾವಿನೋದದ ಬಗೆಯ ಹೇಳಲಂಜುವೆನಯ್ಯ.
ಹೇಳುವೆ-ನೀನು ಮಾಂಕೊಳದಿರಯ್ಯ.
ಹೇಲಕುಳಿಯೊತ್ತಿನ ಉಚ್ಚೆಯ ಬಚ್ಚಲು.
ಹಡುಕುನಾರುವ ಕೀವು ತುಂಬಿದ ಹಳೆಯ ಗಾಯ.
ಕೋಲುಕುಕ್ಕುವ ತೊಗಲು ಪಡುಗ.
ಆ ಪಡುಗದ ಸೊಗಸು ಮಾನವರ ತಲೆಗೇರಿ
ಮುಂದಲ ಕಾಲಿನಲಿ ಅಮರ್ದಪ್ಪಿ ಪಿಡಿದು
ಹೆಣ್ಣುನಾಯ ಬಾಯಲೋಳೆಯ
ಗಂಡು ನಾಯಿ ಚಪ್ಪರಿದು ನೆಕ್ಕಿಕೊಳುತ್ತ
ಬಾಯೊಳಗೆ ಕಿಸುಕುಳದ ಬಾಯನಿಕ್ಕಿ
ಒಡೆಯನೊಂದಾಗಿ ಬಂದ ಹೊಸ ಮನುಷ್ಯರ ಕಂಡ ನಾಯಂತೆ
ಕರುಗಳ ಹಾಕುವ ಕಾಮದೈನ್ಯರ ಕರ್ಮಭೋಗಮಂ ಕಂಡು
ಹರಣ ಹಾರಿ ಮನ ನಾಚಿ ಹೇಸಿ ಹೇಡಿಗೊಂಡು
ಹೊನ್ನು ಹೆಣ್ಣು ಮಣ್ಣೆಂಬ ಮೂರು ಸಂಕಲೆಯ ಕೀಲ
ಜ್ಞಾನ ಚೀರಣದಿಂದ ತಡೆಗಡಿದು
ವಿರಕ್ತನಾಗಿ ನಿರ್ವಾಣ ಪದಕ್ಕೆ ಕಾಮಿತನಾಗಿ
ಸ್ವಾನುಭಾವದಲ್ಲಿ ಆಚರಿಸುವ ಆಚರಣೆಯಾವುದೆಂದರೆ
ಅಂಗದ ಮೇಲೆ ಲಿಂಗವುಳ್ಳ ಪಟ್ಟದರಾಣಿ ಅರಸುವೆಣ್ಣು
ಅನಾದಿನಾಯಕಿ ಜಾರೆ ಪತಿವ್ರತೆ ಪುಂಡುವೆಣ್ಣು
ಕೆಂಪಿ ಕರಿಕಿ ದಾಸಿ ವೇಶಿ ಮೊಂಡಿ ಮೂಕೊರತಿ ಕುಂಟಿ ಕುರುಡಿ
ಇವರೆಲ್ಲರ ಭಕ್ತಿಯಿಂ ಸಮಾನಂಗಂಡು
ಇವರೆಲ್ಲರಂ ಗುರುವಿನ ರಾಣಿವಾಸಕ್ಕೆ ಸರಿಯೆಂದು ನಿರ್ಧರಿಸಿ
ಊರ್ವಶಿ ರಂಭೆ ತಿಲೋತ್ತಮೆಯರಿಗೆ ಸರಿಯಾದ
ಶಂಖಿನಿ ಪದ್ಮಿನಿಗೆಣೆಯಾದ
ರತಿಯ ಲಾವಣ್ಯಕ್ಕೆ ಸರಿಮಿಗಿಲೆನಿಪ ಚಿಲುವೆಣ್ಣುಗಳ
ಗೋಮಾಂಸ ಸುರೆಗೆ ಸರಿಯೆಂದು-
ಭಾವಿಸಿದೆನಯ್ಯ ನೀ ಸಾಕ್ಷಿಯಾಗಿ.
ಕಬ್ಬುವಿಲ್ಲನಂ ಖಂಡಿಸಿ
ಕಾಸೆಯನಳಿದು ಸೀರೆಯನುಟ್ಟು ಗಂಡು ಹೆಣ್ಣಾಗಿ
ನಿನಗೆ ವಧುವಾದೆನಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.
Art
Manuscript
Music
Courtesy:
Transliteration
Martyada bījava bitti kuḍiyoḍeyada munna
kattale beḷagu vistarisi tōrpudarattale
ninna cidanśikanappa śaraṇaṅge
bhūtaḷada bhōgavanōtu baḷasendu
prītiyinda kalpisikoḍuvare ayya?
Rājahansanige amr̥tāhāravanikkabēkallade
garutmana āhāravanikkuvare ayya?
Adentenalu
avaniya bhōgakke atimigilenisikombudu
majjana bhōjana anulēpana
ābharaṇa vastra tāmbūlavayya.
Idakke nūrmaḍi migilenisikombudu
sudatiyara mr̥dunuḍi tekke cumbana
suratasambhramada līlāvinōdavayya.
Ā sarasa līlāvinōdada bageya hēḷalan̄juvenayya.
Hēḷuve - nīnu māṅkoḷadirayya.
Hēlakuḷiyottina ucceya baccalu.
Haḍukunāruva kīvu tumbida haḷeya gāya.
Kōlukukkuva togalu paḍuga.
Ā paḍugada sogasu mānavara talegēri
mundala kālinali amardappi piḍidu
heṇṇunāya bāyalōḷeya
gaṇḍunāyi capparidu nekkikoḷutta
bāyoḷage kisukuḷada bāyanikki
oḍeyanondāgi banda hosa manuṣyara kaṇḍa nāyante
karugaḷa hākuva kāmadain'yara karmabhōgamaṁ kaṇḍu
haraṇa hāri mana nāci hēsi hēḍigoṇḍu
honnu heṇṇu maṇṇemba mūru saṅkaleya kīla
jñānacīraṇadinda kaḍigaḍidu
viraktanāgi nirvāṇa padakke kāmitanāgi
svānubhāvadalli ācarisuva ācaraṇeyāvudendare
aṅgada mēle liṅgavuḷḷa paṭṭadarāṇi arasuveṇṇu
anādināyaki jāre pativrate puṇḍuveṇṇu
kempi kariki dāsi vēśi moṇḍi mūkorati kuṇṭi kuruḍi
ivarellara bhaktiyiṁ samānaṅgaṇḍu
ivarellaraṁ guruvina rāṇivāsakke sariyendu nirdharisi
ūrvaśi rambhe tilōttameyarige sariyāda
śaṅkhini padminigeṇeyāda
ratiya lāvaṇyakke sarimigilenipa ciluveṇṇugaḷa
gōmānsa surege sariyendu-
bhāvisidenayya nī sākṣiyāgi.
Kabbuvillanaṁ khaṇḍisi
kāseyanaḷidu sīreyanuṭṭu gaṇḍu heṇṇāgi
ninage vadhuvādenayyā,
ghanaliṅgiya mōhada cennamallikārjuna.