Index   ವಚನ - 2    Search  
 
ಎನ್ನಾತ್ಮನದೊಂದು ಅರಸುತನದ ಅನ್ಯಾಯವ ಕೇಳಯ್ಯ ಗುರುವೆ. ಪಂಚಭಕ್ಷ್ಯ ಪರಮಾಮೃತವ ಸದಾ ದಣಿಯಲುಂಡು ಒಂದು ದಿನ ಸವಿಯೂಟ ತಪ್ಪಿದರೆ ಹಲವ ಹಂಬಲಿಸಿ ಹಲುಗಿರಿದು, ಎನ್ನ ಕೊಂದು ಕೂಗುತ್ತಿದೆ ನೋಡಾ. ಶ್ವಪಚನನುತ್ತಮನ ಕೂಡೆ ಸಂಕಲೆಯನಿಕ್ಕುವರೆ ಅಯ್ಯ? ಕಲಸಿ ಕಲಸಿ ಕೈಬೆರಲು ಮೊಂಡಾದವು ಅಗಿದಗಿದು ಹಲ್ಲು ಚಪ್ಪಟನಾದವು ಉಂಡುಂಡು ಬಾಯಿ ಜಡ್ಡಾಯಿತು ಹೇತು ಹೇತು ಮುಕುಳಿ ಮುರುಟುಗಟ್ಟಿತು ಸ್ತ್ರೀಯರ ಕೂಡಿಕೂಡಿ ಶಿಶ್ನ ಸವೆದು ಹೋಯಿತ್ತು ತನುಹಳದಾಗಿ ಅಲ್ಲಲ್ಲಿಗೆ ಕಣ್ಣು ಪಟ್ಟಿತು ಮನ ಹೊಸದಾಗಿ ಹನ್ನೆರಡುವರ್ಷದ ರಾಜಕುಮಾರನಾದೆನು. ಇನ್ನೇವೆನಿನ್ನೇವೆನಯ್ಯ ಎನ್ನ ಕೇಡಿಂಗೆ ಕಡೆಯಿಲ್ಲ ಕಾಯವಿಕಾರವೆಂಬ ಕತ್ತಲೆ ಕವಿಯಿತು ಮನೋವಿಕಾರವೆಂಬ ಮಾಯೆ ಸೆರೆವಿಡಿದಳು ಇಂದ್ರಿಯವಿಕಾರವೆಂಬ ಹುಚ್ಚುನಾಯಿಗಳು ಕಚ್ಚಿ ಕಚ್ಚಿ ಒದರುತ್ತಿವೆ ಕಾಮ ವಿಕಾರವೆಂಬ ಕಾಳರಕ್ಕಸಿ ಅಗಿದಗಿದು ನುಂಗುತಿಹಳು ಕಾಯಾಲಾಗದೆ ದೇವ? ಸಾವನ್ನಬರ ಸರಸವುಂಟೆ ಲಿಂಗಯ್ಯ? ಅನ್ಯಸಮಯದ ಗುಮ್ಮಟನ ಕೈವಿಡಿದೆತ್ತಿಕೊಂಡೆ ನಿನ್ನ ಸಮಯದ ಶಿಶು ಬಾವಿಯಲ್ಲಿ ಬೀಳ್ವುದ ನೋಡುತ್ತಿಪ್ಪರೆ ಕರುಣಿ? ಮುಕ್ತಿಗಿದೇ ಪಯಣವೋ ತಂದೆ? ನೀನಿಕ್ಕಿದ ಮಾಯಾಸೂತ್ರಮಂ ಹರಿದು ದಶೇಂದ್ರಿಯಂಗಳ ಗುಣವ ನಿವೃತ್ತಿಯಂ ಮಾಡಿ ಅಂಗಭೋಗ-ಆತ್ಮಭೋಗಂಗಳನಡಗಿಸಿ ಲಿಂಗದೊಳು ಮನವ ನೆಲೆಗೊಳಿಸಿ ಎನ್ನ ಪಟದೊಳಗಣ ಚಿತ್ರದಂತೆ ಮಾಡಯ್ಯ ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.