Index   ವಚನ - 16    Search  
 
ಶರಣಸತಿ ಲಿಂಗಪತಿಯೆಂದು ಬಣ್ಣಿಸಿ ಒಪ್ಪವಿಟ್ಟು ನುಡಿದುಕೊಂಬ ಕುಟಿಲವೆಣ್ಣಲ್ಲವಯ್ಯ ನಾನು. ನಿನಗೆ ಮೆಚ್ಚಿ ಮರುಳಾದ ಪತಿವ್ರತೆಯೆಂಬುದಕ್ಕೆ ದೃಷ್ಟವ ಕೊಟ್ಟು ನುಡಿವುತಿಪ್ಪೆ ಕೇಳಯ್ಯ ಗಂಡನೇ. ಮಾನವರ ಸಂಚವಿಲ್ಲದ ಮಹಾ ಘೋರಾಟವಿಯಲ್ಲಿ ನಾನು ಹೋಗುತಿಪ್ಪ ಆ ಸಮಯದಲ್ಲಿ ಸೋರ್ಮುಡಿಯ ಸೊಬಗಿನ ನಿಡುಹುಬ್ಬಿನ ಕಡುಜಾಣೆ ಅಲರ್ಗಣ್ಣ ಅಂಬುಜಮುಖಿ ಮುಗುಳ್ನಗೆಯ ಸೊಬಗುವೆಣ್ಣು ಬಂದುಗೆಯ ಬಾಯ ಅಂದವುಳ್ಳವಳು ನಳಿತೋಳ ನಾಯಕಿ ಕಕ್ಕಸ ಕುಚದ ಸೊಕ್ಕುಜವ್ವನೆ ಸೆಳೆನಡುವಿನ ಸಿರಿವಂತೆ ಕುಂಭಸ್ಥಳದ ನಿತಂಬಿನಿ ಪೊಂಬಾಳೆದೊಡೆಯ ಕಂಬುಕಂಧರೆ ಕೆಂದಳಿರಚರಣದ ಮಂದಗಮನೆ ಇಂತಪ್ಪ ಚಲುವಿನ ಕೋಮಲಾಂಗಿ ಸರ್ವಾಭರಣಂಗಳ ತೊಟ್ಟು ನವ್ಯ ದುಕೂಲವನುಟ್ಟು ಅನುಲೇಪನಂಗಳ ಅನುಗೈದು ನಡೆತಂದು ಎನ್ನ ಅಮರ್ದಪ್ಪಿ ಅಲಂಗಿಸಿ ಮೋಹಿಸಿ ಮುದ್ದುಮಾಡಿ ಕಾಮಾತುರದ ಭಕ್ತಿಯಿಂದ ಎನ್ನ ಕರಮಂ ಪಿಡಿದು ತನ್ನ ಕೂಟಕ್ಕೆ ಒಡಂಬಡಿಸುವ ಕಾಲದಲ್ಲಿ ನಾನು ಹುಲಿಹಿಡಿದ ಕಪಿಲೆಯಂತೆ ನಡುಗುತಿರ್ದೆನೆ ನಿನ್ನ ಸತಿಯೆಂದು ಕೈವಿಡಿದು ಎನ್ನ ರಕ್ಷಣೆಯಂ ಮಾಡು ನಿನಗಲ್ಲದೆ ಅನ್ಯರಿಗೆ ಕಿಂಚಿತ್ತು ಮನಸೋತೆನಾದೊಡೆ ನೀಂ ನೂಂಕೆನ್ನ ಜನ್ಮಜನ್ಮಾಂತರ ಎಕ್ಕಲನರಕದಲ್ಲಿ ಎನ್ನ ನೀಂ ನೂಂಕದಿರ್ದೆಯಾದಡೆ ನಿಮಗೆ ನಿಮ್ಮಾಣೆ ನಿಮ್ಮ ಅರ್ಧಾಂಗಿಯಾಣೆ ನಿಮ್ಮ ಬಸವಾದಿ ಪ್ರಥಮರಾಣೆ ಎನ್ನೀ ಅತಿಬಿರುದಿನ ಭಾಷೆಯೆಂಬುದು ನಿನ್ನ ಕರುಣವಯ್ಯ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.