Index   ವಚನ - 22    Search  
 
ನಿತ್ಯವಾಗಿಪ್ಪ ಪರಮಾತ್ಮನು ಅನಿತ್ಯವಾಗಿಪ್ಪ ದೇಹದೊಡನಾಡಿ ಜೀವನಾಗಿ ಹೋಗುತ್ತಿದೆ ನೋಡಾ. ನಿತ್ಯ ಅನಿತ್ಯದ ಸಂದನಿಕ್ಕಿದ ಸಮರ್ಥರಾರಯ್ಯ? ಇದಕ್ಕೆ ಅನುಕೂಲವಾಗಿ ಮಾಡಿದವರು ಮತ್ತೊಬ್ಬರುಂಟೆಂದು ನಿನ್ನ ಮನದಲ್ಲಿ ತಿಳಿಯಬೇಡ. ಅದು ತನಗೆ ತಾನೇ ಮಾಡಿಕೊಂಡಿತು. ಅದು ಹೇಗೆಂದೊಡೆ ಆತ್ಮನು ಭೋಗವೆಂಬ ಸೂಜಿಯಂ ಪಿಡಿದು ಆ ಸೂಜಿಗೆ ಮೂರೊಂದು ಕರಣ ಎರಡು ಮೂರು ಇಂದ್ರಿಯಂಗಳೆಂಬ ನವಸೂತ್ರವನೇರಿಸಿ ತನು ಮನದಂಚ ಸೇರುವೆಯಂ ಮಾಡಿ ಕಂಠದಾರಮಂ ಕಟ್ಟಿ ಸಂದರಿಯಬಾರದಂತೆ ಅದು ತನಗೆ ತಾನೆ ಹೊಲುಕೊಂಡಿತ್ತು. ಇದು ಬಿಚ್ಚಿ ಬೇರೆ ಮಾಡುವ ಪರಿಯಾವುದಯ್ಯ? ಭೋಗವೆಂಬ ಸೂಜಿಯಂ ಮುರಿದು ನಾಲ್ಕು ಕರಣ ಐದಿಂದ್ರಿಯವೆಂಬ ಒಂಬತ್ತು ದಾರಮಂ ತುಂಡತುಂಡಿಗೆ ಹರಿಯಲೊಡನೆ ತನು ಪ್ರಕೃತಿಯಂ ಕೂಡಿತ್ತು. ಪ್ರಾಣ ಪರಬ್ರಹ್ಮವಂ ಕೂಡಿತ್ತು ಕಾಣಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.