Index   ವಚನ - 21    Search  
 
ಮುಂದನರಿಯದ ಮತಿಗೆಟ್ಟ ಮರುಳು ಮನವೇ ಕಾಲ ಕಾಮರ ಗೆಲುವ ಉಪಾಯವಾವುದೆಂದು ತಲೆಯೂರಿ ನೆಲನ ಬರೆವುತಿಪ್ಪೆ ಮೊಲ ಜಂಬುಕಂಗಳ ಹುಯ್ಯಲಿಗೆ ಆನೆಯ ಘೌಜನಡ್ಡಮಾಡಬೇಕೇ? ಕಾಲ ಕಾಮರ ಗೆಲುವುದಕ್ಕೆ ಆಲೋಚನೆಯೇತಕಯ್ಯ ಮನವೆ? ಪಂಚೇಂದ್ರಿಯಂಗಳು ಪಂಚಬ್ರಹ್ಮವನಪ್ಪಿ ಅಗಲದಿಪ್ಪುದೇ ಪಂಚಬಾಣನ ಹರಣದ ಕೇಡು. ನಾನು ಪರಬ್ರಹ್ಮದಲ್ಲಿಯೇ ಜನನ. ಎನ್ನ ತನು ಮನ ಧನಂಗಳ ಪರಬ್ರಹ್ಮಕ್ಕೆ ಮಾರುಕೊಟ್ಟೆನೆಂಬ ನಿಚ್ಚಟದ ನುಡಿಯೇ ಕಾಲನ ಗಂಟಲಗಾಣ. ಅದು ಹೇಗೆಂದೊಡೆ ಲಿಂಗಾಂಕಿತವಾದ ವೃಕ್ಷಂಗಳ ಮಂಡಲಾಧಿಪತಿ ಮೊದಲಾಗಿ ಮುಟ್ಟಲಮ್ಮ. ಆನೆಯ ತನುಜನ ಆಡು ಮುರಿದರೆ ಹೀನವಾರಿಗಪ್ಪುದಯ್ಯ? ಈ ಪ್ರಕಾರದ ಸಮ್ಯಜ್ಞಾನದಿಂದ ನಿಮ್ಮ ಶರಣರು ಕಾಲ ಕಾಮರ ಗೆಲಿದರಯ್ಯ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.