Index   ವಚನ - 35    Search  
 
`ಇಕ್ಕಿದ ಹರಿಗೆ ತೊಲದ ಕಂಭ'ವೆಂದು ಬಿರಿದನಿಕ್ಕಿ ಹುಯ್ಯಲ ಕಂಡು ಓಡಿ ಬರುವಂಗೆ ಆ ಬಿರಿದೇತಕಯ್ಯ? ಬತ್ತೀಸಾಯುಧದ ಸಾಧನೆಯ ಕಲಿತು ಕಾಳಗದಲ್ಲಿ ಕೈಮರೆದು ಘಾಯವಡೆದಂಗೆ ಆ ಸಾಧನೆ ಏತಕಯ್ಯ? ಕತ್ತಲೆಗಂಜಿ ಕರದಲ್ಲಿ ಜ್ಯೋತಿಯಂ ಪಿಡಿದು ಹಾಳುಗುಳಿಯಲ್ಲಿ ಬೀಳುವಂಗೆ ಆ ಜ್ಯೋತಿಯೇತಕಯ್ಯ? ಆದ್ಯರ ವಚನಂಗಳ ಸದಾಕಾಲದಲ್ಲಿ ಓದಿ ಶಿವತತ್ವ ಆತ್ಮತತ್ವ ವಿದ್ಯಾತತ್ವವನರಿದು ಆರಕ್ಕೆ ಆರ ನೆಲೆಮಾಡಿ ಮೂರಕ್ಕೆ ಮೂರ ಸಂಬಂಧಿಸಿ ಐದಕ್ಕೆ ಇನ್ನು ಪ್ರತಿಯಿಲ್ಲವೆಂದು ಅರಿದ ವಿರಕ್ತರು ಪುರಾತನರಂತೆ ಸಮ್ಯಜ್ಞಾನ ಕ್ರೀಯಿಂದಲೆ ಆದರಿಸುವುದು, ಭಕ್ತ ವಿರಕ್ತರ ಆಚರಣೆಯೆಲ್ಲಾ ಒಂದೇ. ಅದು ಹೇಗೆಂದರೆ ಭಕ್ತಂಗೆ ಬಹಿರಂಗದ ದಾಸೋಹ. ವಿರಕ್ತಂಗೆ ಅಂತರಂಗದ ದಾಸೋಹ. ಈ ಆಚರಣೆಯನತಿಗಳೆದು ಮನ ಬಂದ ಪರಿಯಲ್ಲಿ ನಡೆದು ಕೆಡುವಂಗೆ ಆದ್ಯರ ವಚನವೇತಕಯ್ಯ? ಆದ್ಯರ ವಚನವೆಂಬುದು ಸಂತೆಯಮಾತೆ? ಪುಂಡರ ಪುರಾಣವೆ? ಲೋಕದ ಜನರ ಮೆಚ್ಚಿಸುವ ಬೀದಿಯ ಮಾತೆ? ಶಿವ ಶಿವ ನೀವು ಶಿವಶರಣರ ಕೂಡಾಡಿ ವಚನಂಗಳ ಕಲಿತು ಆ ವಚನಂಗಳ ನಿಮ್ಮ ಊಟದ ವೆಚ್ಚಕ್ಕೆ ಈಡು ಮಾಡಿಕೊಂಡಿರಲ್ಲದೆ ಮುಂದಣ ಮುಕ್ತಿಯ ಪದವ ಕಾಣದೇ ಹೋದಿರಲ್ಲಾ? ಇದು ಕಾರಣ- ಶಿವಜ್ಞಾನೋದಯವಾದ ಲಿಂಗಾಂಗಿಗಳಿಗೆ ಎನ್ನ ನುಡಿ ಮೈಗಂದೆಯಂ ತುರಿಸಿದಂತೆ ಹಾಲು ಸಕ್ಕರೆಯನುಂಡಂತೆ ಸವಿದೋರುತ್ತದೆ. ವೇಷಧಾರಿ ವಿಶ್ವಾಸಘಾತುಕರಿಗೆ ಎನ್ನ ನುಡಿ ಅಲಗಿನ ಮೊನೆಯಂತೆ ಇರಿಯುತ್ತದೆಯಯ್ಯ ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.