ಎನ್ನಂತರಂಗದಲ್ಲಿ ಕುಮಂತ್ರ ಕುಡಿವರೆದ ಭೇದವ
ನಿನ್ನೊಡನೆ ಮರೆಯಿಲ್ಲದೆ ಆಡುತಿಪ್ಪೆನಯ್ಯ ಒಡೆಯನೇ.
ಜಾಗ್ರದವಸ್ಥೆಯಲ್ಲಿ ಲೋಕೋಪಚಾರ ಬಿಡದು.
ಜಿಹ್ವಾಲಂಪಟತನ ಉಡುಗದು.
ಸುಖ ದುಃಖಕ್ಕೆ ಎನ್ನ ಮನ ಮರುಗುತಿರ್ದು ಬಳಿಕ
ಎನಗೆ ಇಷ್ಟಲಿಂಗದ ಪೂಜೆಯೆಲ್ಲಿಯದೋ?
ಸ್ವಪ್ನಾವಸ್ಥೆಯಲ್ಲಿ ಬ್ರಹ್ಮಾಂಡದೊಳಗುಳ್ಳ
ಕಡೆ ಮೊದಲಿಲ್ಲದ ದುರ್ವಿಕಾರ ಸ್ವಪ್ನದಲ್ಲಿ
ಹರಿದಾಡುವ ಜೀವಂಗೆ
ಪ್ರಾಣಲಿಂಗದ ಪೂಜೆಯೆಲ್ಲಿಯದೋ?
ಸುಷುಪ್ತ್ಯವಸ್ಥೆಯಲ್ಲಿ ಲಿಂಗವ ಕೂಡಿ ಮೈಮರೆದಿರದೆ
ಕನಸಿನಲ್ಲಿ ಸ್ತ್ರೀಯ ಕೂಡಿ ಇಂದ್ರಿಯಂಗಳ ಬಿಟ್ಟು
ಆನಂದಿಸುವ ಕಾಮವಿಕಾರಿಗೆ
ಭಾವಲಿಂಗದ ಪೂಜೆಯೆಲ್ಲಿಯದೋ?
ಈ ಪ್ರಕಾರದ ದುರ್ಗುಣಂಗಳ ನಾನು ಮರೆಮಾಡಿಕೊಂಡು
ಶರಣನೆಂದು ವಚನಂಗಳ ಹಾಡಿದರೆ
ತಿಂಗಳ ಬೆಳಕಿನ ಸಿರಿಯಂ ಕಂಡು ನಾಯಿ
ಹರುಷಂಗೊಂಡು ಬಳ್ಳಿಟ್ಟು ಬೊಗಳಿದಂತಾಯಿತು.
ಅದೇನು ಕಾರಣವೆಂದೊಡೆ
ನೀ ಎನ್ನ ಅಂಗದ ಮೇಲಕ್ಕೆ ಬಂದೆ ಎಂಬ ಸಂತೋಷಕ್ಕೆ
ಉಬ್ಬಿ ಕೊಬ್ಬಿ ಅಹಂಕರಿಸಿ ಹಾಡಿದೆನಲ್ಲದೆ
ನುಡಿವಂತೆ ನಡೆಯಲಿಲ್ಲ ನಡೆದಂತೆ ನುಡಿಯಲಿಲ್ಲ.
ಇದು ಕಾರಣ
ಎನ್ನ ಮನದ ಕಾಳಿಕೆಯ ಕರುಣದಿಂದ ಕಳೆದು
ಅವಸ್ಥಾತ್ರಯಂಗಳಲ್ಲಿ ನಿನ್ನನಪ್ಪಿ ಅಗಲದಿಪ್ಪಂತೆ
ಎನ್ನನು ಪರಮಕಾಷ್ಠಿಯ ಮಾಡಯ್ಯ
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.
Art
Manuscript
Music
Courtesy:
Transliteration
Ennantaraṅgadalli kumantra kuḍivareda bhēdava
ninnoḍane mareyillade āḍutippenayya oḍeyanē.
Jāgradavastheyalli lōkōpacāra biḍadu.
Jihvālampaṭatana uḍugadu.
Sukha duḥkhakke enna mana marugutirdu baḷika
enage iṣṭaliṅgada pūjeyelliyadō?
Svapnāvastheyalli brahmāṇḍadoḷaguḷḷa
kaḍe modalillada durvikāra svapnadalli
haridāḍuva jīvaṅge
prāṇaliṅgada pūjeyelliyadō?
Suṣuptyavastheyalli liṅgava kūḍi maimaredirade
kanasinalli strīya kūḍi indriyaṅgaḷa biṭṭu ānandisuva kāmavikārige
bhāvaliṅgada pūjeyelliyadō?
Ī prakārada durguṇaṅgaḷa nānu maremāḍikoṇḍu
śaraṇanendu vacanaṅgaḷa hāḍidare
tiṅgaḷa beḷakina siriyaṁ kaṇḍu nāyi
haruṣaṅgoṇḍu baḷḷiṭṭu bogaḷidantāyitu.
Adēnu kāraṇavendoḍe
nī enna aṅgada mēlakke bande emba santōṣakke
ubbi kobbi ahaṅkarisi hāḍidenallade
nuḍivante naḍeyalilla naḍedante nuḍiyalilla.
Idu kāraṇa
enna manada kāḷikeya karuṇadinda kaḷedu
avasthātrayaṅgaḷalli ninnanappi agaladippante
ennanu paramakāṣṭhiya māḍayya
ghanaliṅgiya mōhada cennamallikārjuna.