ಕೆಳದಿಯರೊಡನಾಡಿ ಕಾಮಕಲಾಪ್ರೌಢಿಯನರಿದು
ಪ್ರಾಣಕಾಂತನ ಒಲಿಸಿ ಸುರತಸಂಯೋಗದೊಳಿಪ್ಪ ಕಾಮಿನಿಗೆ
ಮತ್ತೆ ಕೆಳದಿಯರ ಕೂಡಣ
ವಿನೋದಕ್ಕೆ ಮನವೆಳಸುವುದೇ ಅಯ್ಯ?
ಶರಣ ಸಂಭಾಷಣೆಯಿಂದ
ಪುರಾತನವಚನದ ಪರಮಾಮೃತವ ದಣಿಯಲುಂಡು
ಆ ವಚನದ ಹೆಜ್ಜೆವಿಡಿದು ಹೋಗಿ
ತ್ರಿವಿಧಲಿಂಗದ ಆದ್ಯಂತಮಂ ಅರಿದು
ಆ ಲಿಂಗಂಗಳಂ ಅರಿವಿಡಿದಾಚರಿಸಿ
ಷಡಂಗ ಷಡ್ವಿಧಲಿಂಗಂಗಳಿಗೆ ಮಾತೃಸ್ಥಾನವಾದ
ನಿಷ್ಕಳಬ್ರಹ್ಮವೆನಿಪಾ ಸಿದ್ಧಲಿಂಗ ಪ್ರಭುವಂ ಕಂಡು
ಆ ಸಿದ್ಧಲಿಂಗ ಪ್ರಭುವಂ
ಹೃದಯ ತ್ರಿಪುಟಿ ಸುಷುಮ್ನೆಯೆಂಬ
ಮೂರು ಸಿಂಹಾಸನದ ಮೇಲೆ
ಗುರು ಲಿಂಗ ಜಂಗಮವೆನಿಸಿ ಮೂರ್ತಿಗೊಳಿಸಿಕೊಂಡು
ತುಂಬಿ ತುಳುಕದ ಮಂದಮಾರುತ ಮೈ ಸೋಂಕದ
ಭಾನುವಿನಕಿರಣಕ್ಕೆ ಬಳಲದ
ಚಂದ್ರೋದಯಕ್ಕೆ ಅಂದವಾಗದ
ಜನರ ಕಣ್ಮನಕ್ಕೆ ಅಗೋಚರವಾದ
ಜಾಜಿ ಸಂಪಿಗೆ ಇರವಂತಿಗೆ ಮಲ್ಲಿಗೆ
ಕೆಂದಾವರೆ ಸೇವಂತಿಗೆ ಎಂಬ
ಭಾವ ಪುಷ್ಪಂಗಳಲ್ಲಿ ಪೂಜೆಯಂ ಮಾಡಿ
ಬೀಗಿ ಬೆಳವುತ್ತಿಪ್ಪ ಶರಣಂಗೆ
ಮತ್ತೆ ಅನುಭಾವದ ಸುಖ ಸವಿದೋರುವುದೇ ಅಯ್ಯ?
ಕೆನೆ ಸಾಧ್ಯವಾದ ಬಳಿಕ ಹಾಲಿನ ಹಂಗೇತಕಯ್ಯ?
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.