Index   ವಚನ - 43    Search  
 
ಪರಮ ಲಿಂಗಾಂಗಿಯ ಇರವು ಎಂತಿಪ್ಪುದಯ್ಯಾ ಎಂದರೆ ವಾಕ್ಕು ಮೂಲ ಮಂತ್ರದಲ್ಲಿ ಜೋಕೆಗುಂದದೆ ಪಾಣಿ ಶಿವಲಿಂಗಪೂಜೆಗೆ ಮಾಣದೆ ಮನಸಂದು ಪಾದವೇಕಾಂತವಾಸಕ್ಕೆ ಹರುಷದಿಂದ ಪದವಿಟ್ಟು ಗುಹ್ಯ ಬ್ರಹ್ಮಚಾರಿಯಾಗಿ ಆನಂದಮಂ ಅಳಿದು ಪಾಯುವಿನ ಗುಣ ಅದಕ್ಕದು ಸಹಜವೆಂದು ನೆಲೆಮಾಡಿ ಕರ್ಮೇಂದ್ರಿಯಂಗಳ ಕಾಲ ಮುರಿದು ಶಬ್ದ ಮೊದಲು ಗಂಧ ಕಡೆಯಾದ ನಾಲ್ಕೊಂದು ವಿಷಯಂಗಳು ತನುಮನವ ಸೋಂಕುವುದಕ್ಕೆ ಮುನ್ನವೇ[ ಲಿಂಗಾ]ರ್ಪಣವ ಮಾಡಿ ಆ ವಿಷಯಂಗಳಿಗೊಳಗಾಗದೆ ಆತ್ಮತ್ರಯಂಗಳ ತಾಳ ಕೊಯ್ದು ಪಂಚಬ್ರಹ್ಮಂಗಳಂ ಪಂಚೇಂದ್ರಿಯಂಗಳಲ್ಲಿ ಪ್ರತಿಷ್ಠೆ ಮಾಡಿ ಕಾಮುಕತನವ ಕಡೆಗೊತ್ತಿ ಜ್ಞಾನೇಂದ್ರಿಯಂಗಳ ನೆನಹ ಕೆಡಿಸಿ ಪ್ರಾಣ ಮೊದಲಾದ ಮೂರೆರಡು ವಾಯುಗಳ ಜರಿದು ಸೆರೆವಿಡಿದು ಮೊದಲಾ ವಾಯುವಿನ ವಶಮಾಡಿ ಪಂಚವಾಯುವಿನ ಸಂಚಮಂ ಕೆಡಿಸಿ ಅಂತಃಕರಣಗಳೆಂಬ ಮಾನಸಗಳ್ಳರ ಕಳೆದು ದ್ವಾದಶಪತ್ರದ ಹೊಂದಾವರೆಯ ಲಿಂಗಕ್ಕೆ ನಿರಂಜನ ಪೂಜೆಯಂ ಮಾಡುವ ಪೂಜಾರಿಗಳಂ ಮಾಡಿ ಕರಣಂಗಳಂ ಗೆಲಿದು ಅಂತಃಕರಣಂಗಳ ಚಿಂತೆಗೊಳಗುಮಾಡಿ ಆತ್ಮಜ್ಞಾನಮಂ ಅಡಗಿಸಿ ಭೋಗಮಂ ನೀಗಿ ಪಂಚಭೂತಂಗಳೆಂಬ ಭೂಪರಿಗೆ ಪರಿಚಾರಕರಾದ ಇಪ್ಪತ್ತೈದುಜೀವರಿಗೆ ನಿರುದ್ಯೋಗಮಂ ಮಾಡಿ ಫಲಪದಂಗಳನೊದೆದು ನಿರ್ವಯಲಕೂಟಕ್ಕೆ ಮನವಿಟ್ಟು ಇಷ್ಟಲಿಂಗಮಂ ಕರದಲ್ಲಿ ಪಿಡಿದು ಪೂಜೆಯಂ ಮಾಡಿ ಆ ಲಿಂಗಮಂ ಅನಿಮಿಷ ದೃಷ್ಟಿಯಿಂದ ನೋಡುವುದೀಗ ಲಿಂಗದ ನೋಟ. ಅದು ರತ್ನಾಕರ ಜಂಬೂದ್ವೀಪದ ಸುನಾದ ಬ್ರಹ್ಮದ ಕೂಟ. ಹೀಂಗಲ್ಲದೆ ಪಂಚಭೂತಂಗಳ ಕುಟಿಲವ್ಯಾಪಾರಂಗಳೆಂಬ ಬಲೆಗೆ ತಾನು ಸಿಲ್ಕಿ ಭಕ್ತಿ ಜ್ಞಾನ ವೈರಾಗ್ಯಮಂ ಸುಟ್ಟುರುಹಿ ಉಪಾಧಿಕೆಯಲ್ಲಿ ಒಡವೆರದು ಹೊಟ್ಟೆಯ ಕಿಚ್ಚಿಗೆ ಇಷ್ಟಲಿಂಗಮಂ ಕರದಲ್ಲಿ ಪಿಡಿದು ಪೂಜೆಯಂ ಮಾಡಿ ಇದಿರ ಮೆಚ್ಚಿಸುವೆನೆಂದು ಆ ಲಿಂಗವ ನೋಡುವ ನೋಟವೆಂತಿಪ್ಪುದೆಂದೊಡೆ ಹೊತ್ತು ಹೋಗದ ಕೋಡಗ ತಿರುಗಾಟಕ್ಕೆ ಬಂದು ಮಾಣಿಕ್ಯಮಂ ಕಂಡು ಆ ಮಾಣಿಕ್ಯವ ಕರದಲ್ಲಿ ಪಿಡಿದು ಮೂಸಿ ನೆಕ್ಕಿ ನೋಡಿ ಹಲ್ಲುಗಿರಿದು ನೋಡಿ ನೋಡಿ ಕಾಲಮಂ ಕಳೆದ ತೆರನಂತಾಯಿತಯ್ಯ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.