ವಚನ - 1501     
 
ವಾರಿ ಬಲಿದು ವಾರಿಕಲ್ಲಾದಂತೆ ಶೂನ್ಯವೆ ಸ್ವಯಂಭುವಾಯಿತ್ತು. ಆ ಸ್ವಯಂಭುಲಿಂಗದಿಂದಾಯಿತ್ತು ಮೂರ್ತಿವೆತ್ತು, ಆ ಮೂರ್ತಿಯಿಂದಾಯಿತ್ತು ವಿಶ್ವೋತ್ಪತ್ತಿ, ಆ ವಿಶ್ವೋತ್ಪತ್ತಿಯಿಂದಾಯಿತ್ತು ಸಂಸಾರ, ಆ ಸಂಸಾರದಿಂದಾಯಿತ್ತು ಮರವೆ. ಆ ಮರವೆಯೆಂಬ ಮಹಾಮಾಯೆ ವಿಶ್ವವ ಮುಸುಕಿದಲ್ಲಿ ನಾ ಬಲ್ಲೆ, ಬಲ್ಲಿದರೆಂಬ ಅರುಹಿರಿಯರೆಲ್ಲಾ ತಾಮಸಕ್ಕೊಳಗಾಗಿ ಮೀನಕೇತನನ ಬಲೆಗೆ ಸಿಲುಕಿ ಮಾಯೆಯ ಬಾಯ ತುತ್ತಾದರಲ್ಲಾ! ಗುಹೇಶ್ವರಾ.