Index   ವಚನ - 52    Search  
 
ಅಯ್ಯಾ ಬಸವಾದಿ ಪ್ರಮಥರೇ ನಿಮ್ಮ ಕರುಣಪ್ರಸಾದವ ನಾನು ಆದಿ ಅನಾದಿಯಲ್ಲಿ ದಣಿಯಲುಂಡ ದೆಸೆಯಿಂದಲೆನ್ನ ತನು ಷಟ್ಸ್ಥಲವನೊಳಕೊಂಡು ಉದಯವಾಯಿತ್ತು. ಎನ್ನ ಪಾದ ಷಟ್‍ಸ್ಥಲಕ್ಕೆ ಒಪ್ಪವಿಟ್ಟಲ್ಲದೆ ಅಡಿಯಿಡದು. ಎನ್ನ ಹಸ್ತ ಷಟ್‍ಸ್ಥಲಪತಿಯನಲ್ಲದೆ ಪೂಜೆಯ ಮಾಡದು. ಎನ್ನ ಘ್ರಾಣ ಮೊದಲು ಶ್ರೋತ್ರ ಕಡೆಯಾದ ಪಂಚೇಂದ್ರಿಯಂಗಳು ಷಟ್ಸ್ಥಲವನಲ್ಲದೆ ಆಚರಿಸವು. ಎನ್ನ ಮನ ಷಟ್ಸ್ಥಲದ ಷಡ್ವಿಧಲಿಂಗಂಗಳ ಮೇಲಲ್ಲದೆ ಹರುಷಂಗೊಂಡು ಹರಿದಾಡದು. ಎನ್ನ ಪ್ರಾಣ ಷಟ್‍ಸ್ಥಲಕ್ಕೆ ಸಲೆ ಸಂದ ಅಕ್ಕಮಹಾದೇವಿಯವರು ಹೋದ ಬಟ್ಟೆಯಲ್ಲಿ ನಡೆಯುವುದಲ್ಲದೆ ಕಿರುಬಟ್ಟೆಯಲ್ಲಿ ನಡೆಯದು. ಇಂತಿವೆಲ್ಲವು ಷಟ್ಸ್ಥಲವನಪ್ಪಿ ಅವಗ್ರಹಿಸಿದ ನೀಲಾಂಬಿಕೆಯಮ್ಮನವರ ಗರ್ಭದಲ್ಲಿ ಉದಯವಾದ ಮೋಹದ ಕಂದನಾದ ಕಾರಣ ಎನಗೆ ಷಟ್ಸ್ಥಲಮಾರ್ಗದ ವಿರತಿ ನೆಲೆಗೊಂಡು ನಿಂದಿತಯ್ಯ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.