Index   ವಚನ - 61    Search  
 
ಭಕ್ತಿ ಜ್ಞಾನ ವೈರಾಗ್ಯ ತಪ್ಪದೆ ಷಟ್‍ಸ್ಥಲಮಾರ್ಗದಿರವು ತಪ್ಪದೆ ಜ್ಞಾನ ಕ್ರೀಗಳಲ್ಲಿ ಪ್ರೇಮ ತಪ್ಪದೆ ಶರಣಸತಿ ಲಿಂಗಪತಿಯಾದ ಭಾವ ತಪ್ಪದೆ ಇಷ್ಟ ಪ್ರಾಣ ಭಾವಲಿಂಗದ ಪೂಜೆ ತಪ್ಪದೆ ಷಡ್ವಿಧಲಿಂಗಂಗಳಲ್ಲಿ ಅರ್ಪಿತಾವಧಾನ ತಪ್ಪದೆ ತೀರ್ಥಪ್ರಸಾದದಲ್ಲಿ ಒಯ್ಯಾರ ತಪ್ಪದೆ ಮಂತ್ರಗಳಂ ಒಡವರೆದು ಲಿಂಗಸಂಧಾನ ತಪ್ಪದೆ ಹಿಡಿದ ವ್ರತಂಗಳಲ್ಲಿ ನಿಷ್ಠೆ ತಪ್ಪದೆ ನಡೆದಂತೆ ನುಡಿದು ನುಡಿದಂತೆ ನಡೆವ ಭಾವ ತಪ್ಪದೆ ದ್ವೆೈತ ಅದ್ವೆೈತವ ನೂಂಕಿ ಬರಿಯ ವೈರಾಗ್ಯವನೊಪ್ಪುಗೊಳ್ಳದೆ ನಿಜವಿರಕ್ತಿಯ ಹೊಲಬುದಪ್ಪದೆ ಪಂಚೈವರೊಂದಾಗಿ ಸದ್ಯೋನ್ಮುಕ್ತಿಗೆ ಮನವನಿಟ್ಟು ಅರ್ತಿಯಿಂದಾಚರಿಸುವರಯ್ಯ ನಿಮ್ಮ ಶರಣರು, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.