ಒಮ್ಮೆ ಶಿವನೆಯೆಂದು ನೆನೆದರೆ,
ಕಳ್ಳಸುಳ್ಳರಿಗೆಲ್ಲ ಕೈಲಾಸವಾಯಿತೆಂದು
ಹೇಳುವ ಅಣ್ಣಗಳಿರಾ,
ಕೈಲಾಸಪದವಿ ಆದದ್ದು ಸಹಜ,
ಅದೆಂತೆಂದಡೆ:
ಒಬ್ಬ ಕಳವು ಮಾಡಿ ಸತ್ತರೆ,
ಶಿವ ಮೆಚ್ಚಿ ಕೈಲಾಸಕ್ಕೆ ತಕ್ಕೊಂಡು ಒಯ್ಯಬೇಕೆಂದು
ಅವಗೆ ಬ್ರಹ್ಮ ಬರೆದ ಕಲ್ಪನೆಯಲ್ಲಿತ್ತು .
ಅವರಿಗೆ ಕೈಲಾಸಪದವಿ ಆಯಿತು ಕಾಣಿರೊ.
ನೀವು ಕಳ್ಳರಲ್ಲ ಸುಳ್ಳರಲ್ಲ, ಒಳ್ಳೆಯ ಜನರು.
ಶಿಲ್ಪಕಾರನ ಕೈಯಲ್ಲಿ ಹುಟ್ಟಿದ ಶಿಲೆಯ ಲಿಂಗವನು ತಂದು,
ಶಿರದಲ್ಲಿ ಕಟ್ಟಿಕೊಂಡು
ಉಂಬುವಲ್ಲಿ ಶಿವ, ಉಡುವಲ್ಲಿ ಶಿವ,
ಕೊಂಬುವಲ್ಲಿ ಶಿವ, ಕೊಡುವಲ್ಲಿ ಶಿವ,
ನಡೆವಲ್ಲಿ ಶಿವ, ನುಡಿವಲ್ಲಿ ಶಿವ.
ಸರ್ವಾಂಗವೆಲ್ಲ ಶಿವಮಯವಾದ ಮೇಲೆ
ನಿಮಗೆ ಶಿವ ಮೆಚ್ಚಿ, ಕೈಲಾಸಕ್ಕೆ
ತಕ್ಕೊಂಡು ಹೋದನೆ? ಹೋಗಲಿಲ್ಲ.
ಕಾಲಚಕ್ರದ ಪ್ರಳಯಕ್ಕೆ ಒಳಗಾಗಿ,
ಕಾಲಬಾಧೆಯೊಳಗೆ ಬಿದ್ದು ಬಳಲುತಿಪ್ಪಿರಿ.
ಒಂದು ಅನಂತಕೋಟಿ. ಅದು ಎಂತೆಂದರೆ:
ನೆಲುವಿನ ಮೇಲೆ ಇಟ್ಟಿದ್ದ ಹಾಲು ಬೆಣ್ಣೆಯನು ತಕ್ಕೊಂಡು
ಸವಿದು ಉಣಲಾರದೆ, ಆಕಾಶವೆಂಬ ಬಯಲಿಗೆ
ಬಾಯಿ ತೆರಕೊಂಡು ಕುಳಿತರೆ ಹಾಲು ಕರೆದೀತೆ? ಕರೆಯಲರಿಯದು.
ಅದು ಎಂತೆಂದರೆ:
ನಿಮ್ಮ ಅಂತರಂಗವೆಂಬುದ ಅಡಿವಿಡಿದು ಅಳೆದರೆ,
ಒಡನೆ ಮೂರಗೇಣಿನ ಒಳಗೆ ಹೊರಗೆ ಕೈಲಾಸವಾಗಿತ್ತು.
ಆ ಕೈಲಾಸದಲ್ಲಿ ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ
ಈ ಐದುಮಂದಿ ಮಕ್ಕಳನ್ನು ಹಡೆದ ಓಂಕಾರ ಪರಬ್ರಹ್ಮ ದೇವರಿಂದೆ
ಆರುಮಂದಿ ದೇವರಾದಲ್ಲಿ ಆಕಾರಾವಂ(?) ಕೋಟಿ ರುದ್ರ
ನವಕೋಟಿ ವಿಷ್ಣುಗಳು ಇಂದ್ರಸಭೆ ದೇವಸಭೆ ಶಿವಸಭೆ
ನಂದಿನಾಥ ಭೃಂಗಿನಾಥ ಮೊದಲಾದ ಗರುಡ ಗಂಧರ್ವ ಸಿದ್ಧರು
ವಿದ್ಯಾಧರರು ಸಮಸ್ತ ಮುನಿಜನಂಗಳೆಲ್ಲ ಇದ್ದರು ಕಾಣಿರೊ.
ಇಂತೀ ತಮ್ಮ ಅಂತರಂಗದಲ್ಲಿ ತಿಳಿದು ನೋಡಬಲ್ಲಾತಗೆ
ಪಿಂಡಾಂಡವೆಂಬ ಕೈಲಾಸದಲ್ಲಿ ಇದ್ದಂತೆ,
ಬ್ರಹ್ಮಾಂಡವೆಂಬ ಕೈಲಾಸದಲ್ಲಿ ಇದ್ದಂತೆ,
ಬ್ರಹ್ಮಾಂಡವೆಂಬ ಕೈಲಾಸವಲ್ಲಿಯಿತ್ತು,
ಪಿಂಡಾಂಡವೆಂಬ ಕೈಲಾಸವಲ್ಲಿಯಿತ್ತು ಕಾಣಿರೊ.
ಅದು ಎಂತೆಂದರೆ:
ಕೃತಯುಗದಲ್ಲಿ, ಬ್ರಹ್ಮರಾಕ್ಷಸರು ಪೃಥ್ವಿಯ ಆಧಾರದಲ್ಲಿ ನಿಂದು,
ಕೈಲಾಸಕ್ಕೆ ದಾಳಿಯನಿಕ್ಕಿ ಕೋಳು ತಕ್ಕೊಂಡು ಬರುವರು.
ಅವರಿಗೆ ಕೈಲಾಸಪದವು ದೊಡ್ಡದಾಗಿತ್ತೆ? ದೊಡ್ಡದಾಗಿ ಇದ್ದಿಲ್ಲ.
ತ್ರೇತಾಯುಗದಲ್ಲಿ, ಕ್ಷತ್ರಿಯರು [ಪೃಥ್ವಿಯ ಆಧಾರದಲ್ಲಿ ನಿಂದು],
[ಕೈಲಾಸಕ್ಕೆ ದಾಳಿಯನಿಕ್ಕಲು],
ಕೈಲಾಸದೊಡೆಯ ಮರೆಯ ಹೊಕ್ಕ,
ಕಾಮುಕ ಋಷಿಯು ಕಣ್ಣು ತೆಗೆದು,
ಗರಿಯ ಅಂಬಿಗ ತಲೆಗೆ ಕಟ್ಟಿದರು.
ಈಶ್ವರನ ಜಡೆಯೊಳಗಿನ ಗಂಗೆಯನು ಸುಟ್ಟುರುಹಿದ ಮೇಲೆ
ಹಾಸಿತ ಮಾಂಸವನು ಹುಟ್ಟಿಸಿಯಿದ್ದರು.
ಅವರಿಗೆ ಕೈಲಾಸಪದವು ದೊಡ್ಡದಾಗಿ ಇತ್ತೆ?
ದೊಡ್ಡದಾಗಿ ಇದ್ದಿಲ್ಲ.
ದ್ವಾಪರಯುಗದಲ್ಲಿ, ಸೋಮಕ್ಷತ್ರಿಯರು
ಪೃಥ್ವಿಯ ಆಧಾರದಲ್ಲಿ ನಿಂದು,
ಇಂದ್ರಪದದಲ್ಲಿ ಇದ್ದಂಥ ಶ್ವೇತವರ್ಣದ ಆನೆಯನು ತಂದು,
ತಾಯಿಗೆ ನೋಂಪಿಯ ನುತಿಸಿದರೆ,
ಅವರಿಗೆ ಕೈಲಾಸಪದವಿ ದೊಡ್ಡದಾಗಿ ಇತ್ತೆ?
ದೊಡ್ಡದಾಗಿ ಇದ್ದಿಲ್ಲ.
ಕಲಿಯುಗದಲ್ಲಿ ಹುಟ್ಟಿದ ಮನುಜರನು
ಕೈಲಾಸಕೆ ಅಟ್ಟಿದರೇನು
ಒಮ್ಮೆ ಶಿವನೆಯೆಂದು ನೆನೆದರೆ,
ಕೈಲಾಸಪದವಿ ಆದೀತೆಂದು
ಬಹಿರಂಗದಲ್ಲಿ ಹೇಳುವ ಮಾತುಗಳೇ ಬಹಳ.
ಅಂತರಂಗವಿಡಿದು ಹೋದವರು ಒಬ್ಬರು ಇಬ್ಬರು ಕಾಣಿರೊ.
ಅದು ಎಂತೆಂದರೆ:
ಬ್ರಹ್ಮ ಬರೆದ ಕಲ್ಪನೆಯಿಂದ
ಕೈಲಾಸಪದವಿಯಾಗಬೇಕೆಂದು ಇದ್ದರೆ,
ಎಂದೆಂದೂ ಶಿವನೆಯೆಂದು ನೆನೆಯದೆ,
ಜಟ್ಟಿಂಗ ಮೈಲಾರ ಜಿನ ಭೈರವವೆಂಬ
ಕೆಟ್ಟದೇವರ ಪೂಜೆಯ ಮಾಡಿದರೇನು
ಅವನೂ ಬ್ರಹ್ಮ ಬರೆದ ಕಲ್ಪನೆಯಿದ್ದು,
ಸತ್ತುಹೋಗುವಾಗ,
ಅವನ ಶಿವ ಮೆಚ್ಚಿ ಕೈಲಾಸಕ್ಕೆ ತಕ್ಕೊಂಡು ಹೋದನು.
ಬ್ರಹ್ಮ ಬರೆದ ಕಲ್ಪನೆಯಲ್ಲಿ ಅವಗೆ ಕೈಲಾಸಪದವು ಇಲ್ಲದಿದ್ದರೆ,
ಜಟ್ಟಿಂಗ ಮೈಲಾರ ಜಿನ ಭೈರವ ದೇವರುಗಳೆಂಬ
ಕೆಟ್ಟದೇವರ ಪೂಜೆಯ ಬಿಟ್ಟು,
ಎಷ್ಟುದಿನ ಶಿವನೆಯೆಂದು ನೆನೆದರೇನು,
ಅವನು ಬ್ರಹ್ಮ ಬರೆದ ಕಲ್ಪನೆಯಲ್ಲಿದ್ದು,
ಸತ್ತುಹೋಗುವಾಗ
ಅವನನು ಶಿವ ಮೆಚ್ಚಿ ಕೈಲಾಸಕ್ಕೆ
ತಕ್ಕೊಂಡು ಹೋದನೆ? ಹೋಗಲಿಲ್ಲ.
ಅದು ಎಂತೆಂದರೆ:
ಕಾಲಚಕ್ರವೆಂಬ ಪ್ರಳಯಕ್ಕೊಳಗಾಗಿ,
ಕಾಲನ ಬಾಧೆಯಲ್ಲಿ ಬಿದ್ದು ಹೊರಳಾಡುತ್ತಿದ್ದರು ಕಾಣಿರೊ.
ಅದು ಎಂತೆಂದರೆ:
ಬ್ರಹ್ಮ ಬರೆದ ಕಲ್ಪನೆ ಹೊರತಾಗಿ,
ಶಿವನನು ನೆನೆದು ಕೈಲಾಸ ಕಂಡೆವೆಂದು
ತಲೆ ಕೆಳಗಾಗಿ ಕಾಲು ಮೇಲ್ಮಾಡಿ ತಪವ ಮಾಡಿದರೆ,
ಕೈಲಾಸ ಪದ ಆಗದೆಂದು ಇಕ್ಕುವೆನು ಮುಂಡಿಗೆಯ.
ಇದನು ಎತ್ತುವರುಂಟೆ,
ದೇವಧ್ವಜ ಮೃತ್ಯುಂಜಯನ
ಭಾವದೊಲ್ಲಭ ಮುದ್ದನೂರೇಶಾ?