Index   ವಚನ - 19    Search  
 
ಪ್ರಾಣಾಪಾನವ್ಯಾನೋದಾನ ಸಮಾನ ನಾಗ ಕೂರ್ಮ ಕೃಕರ ದೇವದತ್ತ ಧನಂಜಯವೆಂಬ ದಶವಾಯುಗಳ ಪ್ರವರ್ತನೆ ಆ[ವು]ದಯ್ಯಾಯೆಂದಡೆ: ಪ್ರಾಣವಾಯು ಹೃದಯಸ್ಥಾನದಲ್ಲಿದ್ದು ಶ್ವಾಸ ನಿಶ್ವಾಸಂಗಳಂ ಮಾಡೂದು. ಅಪಾನವಾಯು ಗುದಸ್ಥಾನದಲ್ಲಿದ್ದು ಮಲಮೂತ್ರಂಗಳಂ ಅಧೋಮುಖವಾಗಿ ಮಾಡೂದು. ವ್ಯಾನವಾಯು ಕಂಠಸ್ಥಾನದಲ್ಲಿದ್ದು ಕ್ಷುಧೆನಿಮಿತ್ತ ಆವುದಾನೊಂದು ದ್ರವ್ಯಾಪೇಕ್ಷೆಯಂ ಮಾಡೂದು. ಸಮಾನವಾಯು ನಾಭಿಸ್ಥಾನದಲ್ಲಿದ್ದು ಉದ್ದೀಪನ ಪ್ರಕಾಶವಂ ಮಾಡಿಕೊಂಡಂಥ ಅನ್ನವ ದಹಿಸೂದು. ಉದಾನವಾಯು [ಜಿಹ್ವೆ] ಸ್ಥಾನದಲ್ಲಿದ್ದು ನುಂಗೂದು ಉಗುಳೂದಂ ಮಾಡೂದು. ನಾಗವಾಯು ಸರ್ವಾಂಗಮಂ ವ್ಯಾಪಿಸಿಕೊಂಡಿಹುದು. ಕೂರ್ಮವಾಯು ನೇತ್ರಸ್ಥಾನದಲ್ಲಿದ್ದು ಉನ್ಮಿಷ ನಿಮಿಷಂಗಳಂ ಮಾಡೂದು. ಕೃಕರವಾಯು ಘ್ರಾಣಸ್ಥಾನದಲ್ಲಿದ್ದು ಸುಗಂಧದುರ್ಗಂಧಂಗಳಂ ಅರಿದು ಮಾಡೂದು. ಧನಂಜಯವಾಯು ಬ್ರಹ್ಮರಂಧ್ರದಲ್ಲಿದ್ದು, ಷೋಡಶಕಲಾಪ್ರಕಾಶವಂ ಮಾಡೂದು. ದೇವದತ್ತವಾಯು ಮುಖದಲ್ಲಿದ್ದು ಹಾಸ ವಿವರ್ಧನವಂ ಮಾಡೂದು. ಹೀಂಗೆ ದಶವಾಯುಗಳು ದಶಸ್ಥಾನದಲ್ಲಿ ದಶಗುಣ ವರ್ತನವಂ ಮಾಡುವವು. ಅದೆಂತೆಂದಡೆ: ಹೃದಿಸ್ಥಿತೋ ಪ್ರಾಣವಾಯು ಶ್ವಾಸನಿಶ್ವಾಸಕಾರಕಃ | ಗುದೇ ಅಪಾನವಾಯುಶ್ಚ ನೇತ್ರಾಣಾಂ ನಿಮಿಷೋನ್ಮೇಷಕಾರಕಃ || ಕೃಕಲೋಘ್ರಾಣಗಂಧಂ ಚ ಧನಂಜಯಾಶ್ಚ ತೇಜಸಾ | ದೇವದತ್ತೋ ಮುಖಂಚೈವ ಜಿಹ್ವಾಹಾಸ್ಯವಿವರ್ಧನಃ || ಏತಾನಿ ದಶವಾಯುಶ್ಚ ಸ್ಥಾನಸಂಖ್ಯಾ ಪ್ರಕೀರ್ತಿತಾ | ಯೋ ಜಾನಾತಿ ಸಂಯೋಗೀಂದ್ರೋ ಅಪರೋ ನಾಮಧಾರಕಾಃ || ಎಂದುದಾಗಿ, ಇಂತೀ ದಶವಾಯುಗಳ ಸಂಚಾರವನರಿದು, ಪ್ರಾಣಲಿಂಗಿಸಂಬಂಧಿಯಾದರೆ ಯೋಗೀಶ್ವರ. ಹೀಂಗಲ್ಲದೆ ಉಳಿದ ನಾಮಧಾರಕರನೊಲ್ಲ, ನಮ್ಮ ಪರಮಗುರು ನಂಜುಂಡಶಿವನು.