Index   ವಚನ - 20    Search  
 
ಮಲತ್ರಯದ ಸಂಗ ಬಿಡದನ್ನಕ್ಕ ಭಕ್ತರಂದೆನಬಾರದು. ಅನ್ಯದೈವದ ಭಜನೆಯಳಿದನ್ನಕ್ಕ ಮಾಹೇಶ್ವರರೆಂದೆನಬಾರದು. ಅರ್ಪಿತ ಹೊಲಬರಿಯದನ್ನಕ್ಕ ಪ್ರಸಾದಿಗಳೆಂದೆನಬಾರದು. ಲಿಂಗಪ್ರಾಣ ಪ್ರಾಣಲಿಂಗವೆಂಬುಭಯದ ಸಂಬಂಧವನರಿಯದನ್ನಕ್ಕ ಪ್ರಾಣಲಿಂಗಿಗಳೆಂದೆನಬಾರದು. ಬಂಧ ಮೋಕ್ಷದ ದಂದುಗವಳಿಯದನ್ನಕ್ಕ ಶರಣನೆಂದೆನಬಾರದು. ತತ್ತ್ವಮಸಿ ಪದಾರ್ಥದರ್ಥವನರಿಯದನ್ನಕ್ಕ ಐಕ್ಯರೆಂದೆನಬಾರದು. ಇಂತೀ ಷಟ್ ಸ್ಥಲವಿಡಿದು ಷಡಂಗ ಶುದ್ಧವಾಗದ ಬರಿಯ ವೇಷದ ಭಕ್ತಿಯ ಡಂಭಕರ ಮೆಚ್ಚ. ನಮ್ಮ ಪರಮಗುರು ನಂಜುಂಡಶಿವನು.