Index   ವಚನ - 9    Search  
 
ಗುರುಕೃಪಾವಸ್ಥೆಯನು ಆವರಿಸಿಕೊಂಡಿರ್ಪ ಆತ್ಮನ ಅನುಭಾವಸಾರ ಅನುಸ್ಮರಣೆಯಿಂದಾರಾಧಿಸಿ, ಆ ಓಂ ಬೀಜಾಕ್ಷಾರ ಮುಂತಾಗಿ ಆದಿ ಆಧಾರವಿಡಿದು, ಇಹಕ್ಕೂ ಪರಕ್ಕೂ ಎರಡರಲ್ಲಿ ಸಾವಧಾನವೆಂಬ ಸಿದ್ಧಾಸನದಲ್ಲಿ ಕುಳ್ಳಿರ್ದು, ಪದ್ಮನಾಭನ ಮನೋ ಆನಂದವನು ಕ್ಷಮೆ ದಮೆ ಶಾಂತಿ ಸೈರಣೆಯಿಂದ ಸವಿಸ್ತರವನೊಳಕೊಂಡು, ಗಾವಿಲಮನುಜರ ಸಂಗವಿಲ್ಲದೆ, ಪದ್ಮಾಸನವ ಬಲಿದು ಶಿವೋಹಂ ಬ್ರಹ್ಮವೆಂದು ಸಮ್ಯಜ್ಞಾನ ಸಮರಸಭಾವದಿಂದಾಚರಿಸಿ, ಮಾಯಾಮಂತ್ರಮಂ ಆಯಾಸವಿಲ್ಲದೆ ಅಘೋರಮಂತ್ರವಾದ ಅಂತರಮಾರ್ಗದಲ್ಲಿ ನಿಲ್ಲಿಸಿ, ವೀರಾಸನವನಿಕ್ಕಿ ಧೈರ್ಯ ತ್ಯಾಗದ ಮಾಡಲೋಸುಗ, ಪರಿಯಾಯದಲ್ಲಿ ವೀರಮಾಹೇಶ್ವರನೆಂಬ ಜಂಗಮಪರಿಮುಖದಿಂದ ತತ್ಸಂಗಮಾಗಿ, ಪರಮಾನುಬೋಧತ್ರಯಮಂ ವಿವರಿಸಿ, ಶಿವಬೀಜಾಕ್ಷರ ಸಾರಾಯಮಂ ಸವಿದುಂಡು, ಪರಮಜ್ಞಾನ ಪರವಸ್ತುವಿನಿಂದ ಆವಿರ್ಭಾವಮಂ ತೆಗೆದುಕೊಂಡು, ಅದ್ವೈತಕ್ರಿಯೆಯಿಂದಾದ ಧನಮಂ ನೇಮಿಸಲು, ಅದ್ವೈತಭಕ್ತಿಯೆಂಬ ಮಹಾಮನೆಯಲ್ಲಿ ಮನಾನಂದಭರಿತವಾಗಿ, ದೇವತಾಜ್ಞಾನ ಸಮ್ಮಿಶ್ರವಾಗಲು ದೈವದಾರಾಧ್ಯ ಅವಯವಂಗಳು ಅಲ್ಪಾಶ್ರಯ ಮರೆದು, ಬಹುಮಾನದಿಂದ ಆಚರಿಸಿಕೊಂಡಿರ್ಪುದು. ಅಭಿಮಾನಕ್ಕೆ ಕೊರತೆಯಾಗದೆ ಸ್ವಾಭಿಮಾನ ನೀನೆಯೆನಗಲ್ಲ [ವೆ]. ನಿಜಗುರು ನಿರಾಲಂಬಪ್ರಭುವೆ.