Index   ವಚನ - 21    Search  
 
ಎಲೆ ಮಗನೆ, ಶ್ರೀಮತ್ ಸಚ್ಚಿದಾನಂದ ಶೀಲವ್ರತನೇಮವಿಲ್ಲದೆ ಕುಲಗೇಡಿ ಛಲಗೇಡಿ, ಲೋಕಾತ್ಮರು ಬೋಗಳುತಿರ್ಪರಹಿತನೆಂದು ತಿಳಿಯದೆ, ನಿರ್ಮಲವಾದಾತ್ಮನೆಂದು ದುರ್ಭಾವ ದುರ್ಗೋಷ್ಠಿಯಿಂದ ಆಚರಿಸುವಂಥವರಭಿಮಾನಿಗಳು ಗುರುವೆಂದರಿಯರು. ಈ ನರಪ್ರಾಣಿಗಳು ಹರಗುರುವಿಂದಧಿಕಮಾಗಿಲ್ಲವೆಂದು ಸ್ತೋತ್ರವ ಮಾಡರು. ಎಲೆ ಮಗನೆ ನೀ ಎನ್ನ ಆಲಯದೊಳಗೊಂದು ನಾಲ್ವರಿಗ್ಹೇಳಿ, ಬಂಧುವರ ಕೂಡಿಕೊಂಡು, ಫಲಾಹಾರ ಪರ್ಣಾಹರ ಸುವರ್ಣಗಾಳಿಯೆಂಬ ವರ್ಣಾಶ್ರಯದಿಂದ ತಿರಿದುಂಡು ಬಾಳೆಂದು ಆ ಶ್ರೀಗುರುನಾಥನು ಶಿಷ್ಯನಿಗೆ ಕರ್ಣಬೋಧಮಂ ಕೊಟ್ಟು, ಪೂರ್ಣಜ್ಞಾನಾಂಬುಧಿಯೆಂಬ ನಾಮಾಮೃತವನು ಕುಡಿಸಿ, ಮರ್ಮ ಯೋಗಾಭ್ಯಾಸವನು ಸಾಸಿರನಾಮದಿಂದೊಡಗೂಡಿ, ಈಶ್ವರ ನಾಮದ ಫಲ ನಿನಗಾಗಲೆಂದು ಶಿಷ್ಯಂಗೆ ಬೇಸರವಿಲ್ಲದೆ ಅವಸರಮಂಬಟ್ಟು ಪರಮಸಂತೋಷದಿಂದ ಆ ಶ್ರೀಗುರುನಾಥನು ಶಿವಪ್ರಣಮ ಪಂಚಾಕ್ಷರ ಷಡಾಕ್ಷರ ಸಾರಾಯಮಂ ಸವಿ [ವಾಚ್ಯ]ದಿಂದ ತಿಳಿತಿಳಿಯೆಂದಾತ. ನೀನೆ ಎನಗಲ್ಲವೆ ಎಲೆ ಲಿಂಗವೆ, ನಿಜಗುರು ನಿರಾಲಂಬಪ್ರಭುವೆ.