Index   ವಚನ - 20    Search  
 
ಮತ್ತಂ ತನ್ನ ತಾನೆಂಬುದೆ ಬೇಕುಬೇಡೆಂಬುದೇಕಮಾಡು. ಗುರುವೆ ಏಕಾಕಾರವಾದ ನಿಜಾನಂದದರುವೆ, ತಾ ತನಗರುಪುವೆನೆಂದು ತಾತ ದಾತ ಅಜತಾತನಾಗಿ, ಸೋಜಿಗ ರೂಪವ ಧರಿಸಿ, ಓಂ ಬೀಜಾಕ್ಷರವೆ ಮೃದುತರವಾಗಿ ನಾಮಪ್ರೇಮಭಾವದಿಂದೊಡಗೂಡಿ, ಅಮರತ್ವದೊಳಗನುಭವಿಸಿ, ಮೋಕ್ಷಸಿದ್ಧಿಯೆಂದು ಆಗ ಅರುವುವೆನೆಂದು ಸಿದ್ಧಶುದ್ಧ ಪ್ರಸಿದ್ಧಪ್ರಸಾದದಿಂ ಸಂತೋಷಮಂಬಟ್ಟು, ಪರಕಾಯ ಪರಪ್ರವೇಶದಿಂದ ಆನಂದಮಯವಾಗಿ ಆರಾಧ್ಯನೆಂದೆನಿಸಿ, ಆದ್ಯರಿಗೆಲ್ಲ ಚಿದಾಮೃತ ಬೋಧಮಂ ಕುಡಿಸಿ, ಚಿದಾನಂದಮಯಸ್ವರೂಪವಾಗಿ, ಚಿತ್ ಪ್ರಕಾಶವೆಲ್ಲ ಪರಮಪ್ರಕಾಶವಾಗಲು, ಆವಾಗಲೂ ಹರಹರಾ ಶಂಕರಾ ಗೌರೀವಲ್ಲಭನೆಂದು, ತತ್ವಾರ್ಥನ್ಯಾಯದಿಂದ ಪಾರಮಾರ್ಥವೆ ಪರಶ್ರುತಿ ಪರವಸ್ತು ನಿಜಾಚರಣೆಯಲ್ಲಿ ಪರವಶನಾಗಿ ಗುರು ಸಕೀಲಗಳನ್ನಳವಟ್ಟು, ಗುರು ಮುಟ್ಟಿ ಗುರುವಾಗಿರಬಲ್ಲಾತನು ಆತನೆ ವೀರಮಾಹೇಶ್ವರನು, ಆತನೆ ಪರಶಿವನು. ಆತನು ತಾನು ಜಾತಿ ಅಭಿಮಾನಗಳೆಲ್ಲ ಕೂಡಿಕೊಂಡು ಮೃಡಲೀಲೆಯಿಂದ ತಿರಿದುಂಡು ಸಿರಿಸಂಪತ್ಕರವುಳ್ಳಾತನಾಗಿ, ಅರಿವು ಕುರುಹು ಕೂನವಿಲ್ಲದೆ ಎಲ್ಲರೊಳಗೆಲ್ಲ ಬಲ್ಲಿದನು. ಅಲ್ಲಮಪ್ರಭುವಿದ್ದನು, ಖುಲ್ಲ ಬಿಜ್ಜಳನ ಹಲ್ಲು ಮುರಿದನು. ತನ್ನ ತಾನೆಂಬುದ, ಬೇಕು ಬೇಡೆಂಬುದ ಏಕ ಮಾಡುವೆ. ಎನ್ನಭವ ಶಂಭು ಶ್ರೀಗುರುವೆ, ನಿಜಗುರು ನಿರಾಲಂಬಪ್ರಭುವೆ. ಸಾಧನ ಗುಪ್ತಭಾವ ಧರ್ಮಾರ್ಥನ್ಯಾಯ ಸುಮಾಪ್ತ ಮಂಗಳ ಮಹಾಶ್ರೀ. ಗುರುವು ಶಿಷ್ಯನಿಗೆ ನಿರೂಪ ಮಾಡಿದ್ದು || ವಚನ ||