Index   ವಚನ - 27    Search  
 
ಮತ್ತಂ ಸಾಕ್ಷಿ: ಅಪ್ಪಯ್ಯ ಗುರುರಾಯನೆ ಕೇಳು: ಗುರುದೈವವೆಂದು ಮಮಕರ್ತನೆಂದನುಭವಿಸಿ, ಆ ಮಹತ್ತರೊಳು ನಮಃ ಶಿವಾಯ, ನಮೋ ಹರಾಯವೆಂದೆಂಬ ಪಂಚಾಕ್ಷರ ಮೂಲದ್ವಾರಮಂ ತಿಳಿದು, ಸಿದ್ಧಂ ಶಿವಗಾರಾಧ್ಯನಾಗಿ, ತಮಗೆ ಬಂದ ಪದಾರ್ಥಮಂ ಭೋಗಿಸಿ, ಆ ಮಹಾಗುರು ದೈವವೆಂದು ನಾಮವೆಂಬುದಕ್ಕೆ ಬಹುಮಾನಗಾರನಾಗಿ, ಮಾತನಾಡದೆ ಬಾಯಿ ಬಿಚ್ಚಾಡದೆ, ವಿವೇಕದಿಂದ ಸ್ವಾಭಾವಿಕರಿಗೆಲ್ಲ ಆನಂದದಲ್ಲಿ ಕುಳಿತು, ಅ ಆ ಇ ಈ ಉ ಊ ಎ ಏ ಐ ಒ ಓ ಔ ಅಂ ಅಃ ಎಂಬುದರೊಳಗೊಂದು ಎನ್ನ ಸ್ವಾಭಿಮಾನಿಗಳು ಬಲ್ಲರೆಂದು ಹೇಳುತಿರ್ಪೆನಲ್ಲದೆ, ಆಹಾ ನಾನು ಪೂರ್ಣವಿಲ್ಲದೆ ಜ್ಞಾನಭಾವದಿಂದೊಡಗೂಡಿ ಏನೇನೂ ಅರಿಯದ ಮೂರ್ಖನು, ಮನಬಂದಂತೆ ಕೂಗುತಿರ್ಪೆನು. ಎನ್ನ ಮೂರ್ಖತ್ವಮಂ ತನ್ನೊಳಡಗಿದ ನ್ಯಾಯತಾರ್ಥ ಯಥಾರ್ಥ ಕೃತಾರ್ಥ ಭಾವಾರ್ಥಮಂ ನೀನೆ ಬಲ್ಲೆಯಲ್ಲದೆ ನಾನರಿಯೆನು. ಈ ಸುಕೃತಮಂ ಅಸುವಿಗಾಧಾರನಾಗಿ, ಅಶ್ಯೋಪಚಾರದಲಿ ವೇಷಧಾರಿಯಾಗಿ ಮಾಸಾಭ್ಯಂತರದಲಿ ಮರೆದೆಯಾದರೆ, ನಿಮ್ಮ ಧರ್ಮ, ನಿಮ್ಮ ಸ್ವಧರ್ಮವಲ್ಲವೆ. ಅಯ್ಯಾ ಎಲೆ ಲಿಂಗವೆ, ಗುರು ಶಂಭುಲಿಂಗವೆ, ನಿಜಗುರು ನಿರಾಲಂಬಪ್ರಭುವೆ.