Index   ವಚನ - 29    Search  
 
ಮತ್ತಂ ಸಾಕ್ಷಿ: ಅಪ್ಪಯ್ಯ ಗುರುರಾಯ ಕೇಳು: ಎನ್ನ ತಿಪ್ಪೆಗೆ ಪಟ್ಟಮಂ ಕಟ್ಟಿ, ದಿಟಟನಹುದೆಂದೆನಿಸಿ, ಬಟ್ಟಬಯಲೊಳಗೊಂದು ಅಟ್ಟುಳಿಗನ ಮಿಂಡಗ ಮಗನೆಂದು, ಹೊಟ್ಟೆವುರಿಗೆ ಸೂಳೆಮಗನೆ ಅಹೋ ಬಾಯೆಂದು ಕರೆಯಲು, ನೆಟ್ಟನೆ ಮಾತಿಗಾಗಿ ಕೋಪವಿಲ್ಲದೆ ದಿಟ್ಟವಾಕ್ಯನು ಸೃಷ್ಟಿಕರ್ತನ ಮಾಡಿಬಿಟ್ಟಿತಲ್ಲದೆ, ದಿಟ್ಟ ನಾನು ಭ್ರಷ್ಟರ ನಡೆನುಡಿಯನು ಆವರಿಸಿಕೊಳ್ಳದೆ, ಕಷ್ಟಕರ್ಮವೆಲ್ಲ[ವು] ಅಷ್ಟದಿಕ್ಪಾಲಕನ ಸೇರಿದವು. ಎಷ್ಟಕ್ಕಷ್ಟೆ ಸರಿಮಾಡಿ ಪರಿತಾಪಮಂ ಬೋಧಿಸಿ, ಅಷ್ಟಕಷ್ಟೆ ಅನುಕೂಲ ಶಿವಾನುಕೂಲವಾಗಲು, ಜ್ಞಾನದ ಬಯಕೆಯೆಂದು ತೀರುವುದಲ್ಲದೆ, ಒಟ್ಟುಕಷ್ಟ ವಂಶಪಾರಂಪರ್ಯ ಗುರುಶಿಷ್ಯನಿಗೆ ಶರಣಸಂತತಿಗಳಿಗೆ ಹರಗಣಸ್ತೋಮವನು ಬೆರೆದೇಕಮಯವಾಗುವುದು. ಇದರ ವಿವರವನು ಅರಿಯದ ಮುರ್ಖರಿಗೆ ಆದಿವ್ಯಾಧಿಕಷ್ಟಗಳು ಕಾಡುವುದೆ ಸಾಕ್ಷಿ. ಉದರ ನಿಮಿತ್ಯದ ಉರುಲುಗಳ್ಳರಿಗೆ ಒದರಿಕೊಂಬುವುದೆಂತಯ್ಯಾ. ಏತಕಯ್ಯಾ ಎಲೆ ಲಿಂಗವೆ, ಗುರುಶಂಭುಲಿಂಗವೆ, ನಿಜಗುರು ನಿರಾಲಂಬಪ್ರಭುವೆ.