Index   ವಚನ - 30    Search  
 
ಮತ್ತಂ ಸಾಕ್ಷಿ: ಎಲೆ ಮೆಚ್ಚುಗಾರನಾದ ಹುಚ್ಚುಮಗನೆ ಕೇಳೊ. ಎನ್ನ ವಾಚ್ಯಸಿದ್ಧಗಳಿಷ್ಟು. ಈ ಲೋಕದಲ್ಲಿ ವಾಕ್ವಾದವ ಕಲಿತು, ವಾಕ್ಯಾನುಸಾರಮಂ ಅರಿಯದೆ, ದುಃಖದೊಳಗಿಲ್ಲದವರಾಗಿ ಕಕ್ಕುಲಾತಿಯೆಂಬ ದುಃಖಪ್ರಾಪ್ತಿಗೊಳಗಾಗಿ ಹೋಗುವರಲ್ಲದೆ, ಸೊಕ್ಕಿನಿಂದ ಅನುಭವಿಸುವಂಥ ಅಧಮರು ಎನ್ನ ವಚನಸಿದ್ಧಿಯನು ಪಡಕೊಂಡವರೆಷ್ಟು? ಸೂಚನಬಿನ್ನಹ, ಗಟ್ಟಿಬಿನ್ನಹ ನಡೆಸುವರಲ್ಲದೆ, ವಚನಾಮೃತಮಂ ಸವಿದುಂಡು ಕಾಲಸೂಚನವ ಚೆನ್ನಾಗಿ ಹೇಳುವವರಿಗೆ ಮೂಲಪ್ರಣಮ ಪಂಚಾಕ್ಷರ ನಾಲಿಗೆಯಲ್ಲಿ ಅಡಕವಾಗಿರ್ಪುದು. ದೃಢಮನ ನಂಬಿಗೆಯುಳ್ಳವರಿಗೆ ಬೆಡಗು ಕೂಗುತಿರ್ಪುದು, ಮಡಿ ಮಾನ್ಯಗಳ ನಡೆಸುವುದು. ಹಾಳಹರಟೆ ಪುರಾಣಗಳನ್ನು ಕಲಿತು, ಖಾಲಿ ದುವ್ರ್ಯಸನದಿಂದ ಜಾಳುಮಾತುಗಳನಾಡುವವರ ಕಂಡು, ಕೇವಲ ದಾರಿದ್ರರೆಂದು ಹೇಳುವುದು. ನಮ್ಮ ಶಿವಶರಣರ ವಾಕ್ಯವನು ವಚನಾನುಭಾವವನು ಮೂಲಪುರುಷರಾಗಿ ಹಾವಿನಹಾಳ ಕಲ್ಲಪ್ಪಯ್ಯಗಳ ಸಾಕ್ಷಿಯಿಂದೊಡಗೂಡಿದವರ ಸಾಕ್ಷಿ. ಜೀವನ ಹಾಳು ಮುದನಹಾಳು ಹುಚ್ಚವೀರಪ್ಪಯ್ಯನೆಂದು ಹೆಸರಿಟ್ಟು ಕರೆವೆನಲ್ಲದೆ ವಾಚಿಕನಾಗಿ ಜಗಳಾಡುವಂಥದು, ಎಲೆ ಮಗನೆ, ನಿನ್ನ ಜ್ಞಾಪಕವಲ್ಲವೆಂದಾತ. ನೀ ಎನ್ನೊಳಗಲ್ಲವೆ ಎಲೆ ಲಿಂಗವೆ, ಗುರು ಶಂಭುಲಿಂಗವೆ, ನಿಜಗುರು ನಿರಾಲಂಬಪ್ರಭುವೆ.