Index   ವಚನ - 39    Search  
 
ಮತ್ತಂ ಸಾಕ್ಷಿ: ಎಲೆ ಮಗನೆ ಕೇಳು: ಈ ಲೋಕದಲ್ಲಿ ಮೂಕಬಸವಣ್ಣನ ಮಾಡಿಟ್ಟು, ಮಾತಾಡಿಸಲಹರೆ, ಹಸಿವು ತೃಷೆ ನಿದ್ರೆ ಅಡಗಿಸಲಹರೆ. ಕಾಕುಪುರಾಣವನು ಬಿಚ್ಚಿ ಹೇಳುವರಷ್ಟು. ಮಾತುಗ[ಳಿನೊ]ಳಗೊಳ್ಳದೆ ಮತಿಭ್ರಷ್ಟರಾಗಿ, ವ್ಯಸನದಿಂದ ಹಸಿವು ತೃಷೆಗಾಗಿ ಗೋಳಾಡುವರು. ಅಶನಗಾಣದೆ ಈಶನ ಧ್ಯಾನಿಸಲು ಹಸನಾಗುವುದೆಂತು? ವಾಸನೆ ಪರಿತಾಪವು ಹಾಸ್ಯವಾಗಿರ್ಪುದು. ತಾ ನಿಮ್ಮ ದಾಸನೆಂದು ನಿಜದಾಸನಾಗಿ, ಬೇಸರವಿಲ್ಲದೆ ನಿಜ ಅಭ್ಯಾಸಮಾಡಲು, ಕೊಟ್ಟಭಾಷೆ ತಪ್ಪುವುದೆಂದಿಗೆ? ಮಾಯಾಪಾಶದಲ್ಲಿ ಬಿದ್ದು, ಆಶಾಲಾಂಛನ ವೇಷಧಾರಿಗಳಿಗೆ ಯೋಗ್ಯವಾಗುವುದೆ? ಈಶನ ಕೃಪಕಟಾಕ್ಷವನು ಸಾಸಿರನಾಮದ ಬೆಡಗು ನಿಶ್ಚಯಿಸುವುದೆಂತು? ಮೂರುಕಾಸು ಬಾಳದ ಮನುಜರು ನೀವು ಕೇಳಿರೊ. ಆಸರಿಲ್ಲದೆ ಉಳ್ಳಿ ಆಲ್ಪರಿವುದಲ್ಲದೆ, ಪಶುಪ್ರಾಣಿಗಳಿಗೆ ಶಿಶುವಿನ ಚಿಂತೆ, ಶಿಶುವಿಗಲ್ಲದೆ ಹಾಲಿನ ಚಿಂತೆ. ಅಸಮಾಕ್ಷಸಾಂಬ ಶ್ರೀಗುರುವಿನೊಳಗಾದ ಶಿಷ್ಯನಿಗೆ ಬಿಸಿಲಿಲ್ಲದ ಬಾವಿಯೊಳಗನ ಹೆಸರಿಲ್ಲದ ಮರನಾಗಿ ಬೆಳೆಯುವುದೆ? ನಿಜಶಾಂತಿ ವಶ ತಪ್ಪಿ ತಿರುಗುವರ ಕಂಡು, ನಾ ನಾಚುವೆನಲ್ಲದೆ, ವಾಚಕನಾಗಿ ದಣಿದುಕೊಳ್ಳಲೇಕೆ. ಸೂಕ್ಷ್ಮದಿಂದ ಅನುಭವಿಸಲಾಗಿ ಸಂಶಯವಿಲ್ಲದೆ ಸಂತೋಷಮಂಬಟ್ಟು, ಪರಮಪ್ರಕಾಶನೆಂದು ಹೇಳಿಕೊಂಬುವಂಥದು ನಿನಗೆಚ್ಚರವೆ. ಎಲೆ ಲಿಂಗವೆ, ಗುರುಶಂಭುಲಿಂಗವೆ, ನಿಜಗುರು ನಿರಾಲಂಬಪ್ರಭುವೆ.