Index   ವಚನ - 38    Search  
 
ಮತ್ತಂ ಸಾಕ್ಷಿ: ಅಪ್ಪಯ್ಯ ಗುರುರಾಯ ಕೇಳು: ನೀನಿಕ್ಕಿದ ಮುಂಡಿಗೆಯ ಅಕ್ಕಮಹಾದೇವಿ ಬಲ್ಲಳಲ್ಲದೆ, ಮಕ್ಕಳಿಲ್ಲದ ಬಂಜೆ ಎನ್ನಕ್ಕರವ ತೀರಿಸುವಳಯ್ಯಾ. ಮಕ್ಕಮಾರಿ ಸೂಳೆಮಕ್ಕಳು ದಿಕ್ಕುಗಾಣದೆ ಹೊಕ್ಕು, ಮಿಕ್ಕ ಪ್ರಸಾದಮಂ ಭೋಗಿಸದೆ, ತೆಕ್ಕೆ ಕಾಯಕಮಂ ಮಾಡಿಕೊಂಡು ಠಕ್ಕಭಕ್ತಿಯ ನಡೆಸುವರಯ್ಯಾ, ಇದಕ್ಕುಪಾಯವೇನಯ್ಯಾ? ರೊಕ್ಕದ ಚಿಂತೆ ಘನವಾಗಿ ಕಕ್ಕುಲಾತಿಯಂಬಟ್ಟು, ಮಕ್ಕಳು ಮರಿಮೊಮ್ಮಕ್ಕಳಿಗೆ ತಕ್ಕತಕ್ಕಷ್ಟು ದ್ರವ್ಯವನು ಕೊಟ್ಟು, ಎಕ್ಕಲಿಗೆ ಜೋ ಎಂದಳುತಿರ್ಪರಯ್ಯಾ. ನರಿ ಕಕ್ಕೆಕಾಯಿ ತಿಂದು ಬಹುದುಃಖಪಡುತಿರ್ಪುದಲ್ಲದೇ ಗತಿಗೊಂದಲಿಲ್ಲ. ಈ ಮಕ್ಕಮಾರಿಗಳ ಸ್ಥಿತಿಗತಿಯು, ಆ ನರಿಯಿರುವ ಸ್ಥಿತಿಗತಿಯು ಒಂದೆಯಾಗಿರ್ಪುದು. ಎನ್ನಕ್ಕ ಮಹಾದೇವಿ ಮುಖ್ಯವಾದ ಆತ್ಮವಿಚಾರದಿಂದ ಬೋಧಮಂ ಸವಿದುಂಡು, ಮುಕ್ಕಣ್ಣನೆಂಬ ಒಕ್ಕಲ ಕೂಲಿಕಾರನ ಕೂಡಿಕೊಂಡು, ಬೈಲಾಕಾರವಾಗಿ ಕದಳಿಬನಕ್ಕೆವಂದಳಲ್ಲದೆ, ಎನ್ನಕ್ಕರವು ತೀರಿಸಲು. ಮಕ್ಕಳಿಲ್ಲದ ಬಂಜೆ ತಾನೆ ತಾನಾಗಿಹುದಯ್ಯಾ. ರೆಕ್ಕೆಯಿಲ್ಲದ ಪಕ್ಷಿ ಗಗನಕ್ಕೆ ಹಾರುವೆನೆಂದು ದಿಕ್ಕುಗೆಟ್ಟು ಕಕ್ಕಾವಿಕ್ಕಿಯಾಗಿ ತಿರುಗಬಾರದೆಂದು ಲೆಕ್ಕದೊಳಗಾಡುತಿರ್ಪೆನಯ್ಯಾ. ಎಲೆ ಲಿಂಗವೆ, ಗುರು ಶಂಭುಲಿಂಗವೆ, ನಿಜಗುರು ನಿರಾಲಂಬಪ್ರಭುವೆ.