Index   ವಚನ - 8    Search  
 
ಆದಿ ಅನಾದಿಯ ಮಧ್ಯದ ಭೂಮಿಯಲೊಂದು ಸಾಗರ ಹುಟ್ಟಿತ್ತು. ಸಾಗರದ ನಡುವೆ ಒಂದು ಸಲಿಲ, ಸಲಿಲದ ಮೇಲೊಂದು ನಿಳಯ. ನಿಳಯದೊಳಗೊಬ್ಬ ಸೂಳೆ. ಯೋನಿಯೆಂಟು, ಮೊಲೆ ಮೂರು, ತಲೆಯಾರು, ಕೈ ಐದು, ಕಾಲೊಂದು. ಇಂತೀ ನಟನೆಯಲ್ಲಿ ಆಡುತ್ತಿರಲಾಗಿ, ನೋಡಿದವ ಮನಸೋತು ಕೂಡಿಹೆನೆಂದಡೆ, ಕೂಡಬಾರದು ಯೋನಿಯೆಂಟಾದವಳ. ಹಿಡಿವಡೆ ಮೊಲೆ ಕೂರಲಗು, ಚುಂಬನಕ್ಕೆ ಅಧರ ನಂಜು, ತೆಕ್ಕೆಗೆ ಅಳವಲ್ಲ. ಇದು ಎನಗೆ ಸುಖಕ್ಕಚ್ಚುಗವೆಂದು ಬೆಚ್ಚಿದೆ. ಇವಳ ಕೂಟ ಒಚ್ಚತ ಬೇಡ, ಅಲೇಖನಾದ ಶೂನ್ಯ ಕಲ್ಲಿನ ಮರೆಯಾದವನೆ.