Index   ವಚನ - 4    Search  
 
ನಹ್ಯತೆ ಸಹ್ಯತೆ ಶಂಕರಿತೆ ಮೂಲಭದ್ರಿಕೆ ಮಾಯಾರಿತು ಮಂತ್ರರಿತು ತಂತ್ರಸಾಧನ ಮಾತ್ರಾಯ ಪೂರ್ವನಿರೀಕ್ಷಣೆ ರಘುವಾಚ ವಾದಮೂಲ ವೈದಿಕಧರ್ಮ ಸಾಂಖ್ಯನ ಮತ ವ್ಯಾಪಾರ ಸಂಗ್ರಹ ಮಾಯಾ ತರ್ಕ ಶೂನ್ಯ, ಉತ್ತರ ಸಂಕಲ್ಪ ಚಿಂತನೆ ಮೊದಲಾದ ವೇದಾಧ್ಯಾಯ, ಉಭಯಚಿಂತನೆಯಾದರೂ ವೇದವೇದ್ಯರಲ್ಲ. ಅದೆಂತೆಂದಡೆ: ಮದವ ಸ್ವೀಕರಿಸಿದ ಮದೋನ್ಮತ್ತನಂತೆ, ತನ್ನ ಕೊರತೆಯ ತಾನರಿಯದೆ ಇದಿರಿಗೆ ಚತುರತೆಯನೊರೆವವನಂತೆ, ವೇದಘಾತಕರಲ್ಲದೆ ವೇದವೇದ್ಯರಲ್ಲ. ವೇದವೇದ್ಯರಾರೆಂದಡೆ ತಾನೆಂಬುದ ತಾನರಿದು, ತಾನೆಂಬ ಭಾವ ಏನೂ ಇಲ್ಲದೆ, ಶ್ರುತಿ ಸ್ಮೃತಿ ತತ್ತ್ವಜ್ಞಾನ ಭೇದಂಗಳ ಧ್ಯಾನಪರಿಪೂರ್ಣನಾಗಿ, ಪ್ರಾಣಿಗಳ ಕೊಲ್ಲದೆ, ಗೆಲ್ಲ ಸೋಲವನೊಲ್ಲದೆ, ತ್ರಿವಿಧದರ್ಚನೆಯಲ್ಲಿ ನಿಲ್ಲದೆ, ಎಲ್ಲಾ ಆತ್ಮಂಗಳಲ್ಲಿ ಸಲ್ಲೀಲೆವಂತನಾಗಿ, ಭಾವ ನಿಜವಸ್ತುವಿನಲ್ಲಿ ವೇಧಿಸಿ ನಿಂದಾತನೇ ವೇದವೇದ್ಯ, ಲಲಾಮಭೀಮಸಂಗಮೇಶ್ವರ ಲಿಂಗದೊಳಗಾದ ಶರಣ.