Index   ವಚನ - 20    Search  
 
ಇನ್ನೊಂದು ಭಾಷೆಯನವಧರಿಸುವದು ಮಹಾಮಹಿಮ ಗುರುವೆ, ಮುನ್ನಾದುದಕ್ಕೆ ನಿನ್ನ ಮನ ಬಂದಂತೆ ಮಾಡು. ಇನ್ನೊಂದು ಭಾಷೆಯನವಧರಿಸುವದು ಮಹಾಮಹಿಮ ಲಿಂಗವೆ, ಪರವಧುವೆನ್ನ ಹೆತ್ತತಾಯಿ ಸಮಾನ. ಇದ್ದವರೆನ್ನ ಸಹೋದಯಸ್ತ್ರೀಯ ಸಮಾನ. ಪಣ್ಯಾಂಗನೆಯರ ಸಂಗವೆನಗೆ ನಾಯಮಾಂಸ ನರರಡಗಿನ ಸಮಾನ. ದಾನವರ ಸಂಗವೆನಗೆ ಸೂಕರನ ಮಲದ ಸಮಾನ. ಇಹಿಂಗೆಂದು ಭಾಷೆಯ ಮಾಡಿ, ತಿರುಗಿ ಆಸೆ ಮಾಡಿ ಕೂಡಿದೆನಾದಡೆ, ನಿಮ್ಮ ಪ್ರಸಾದಕ್ಕೆ ಬಾಯಿದೆರೆಯನು. ತನು ಲೋಭದಿಂದ ಕೂ[ಡಿದೆನಾದ]ಡಾ ತನುವ ದಿಗುಬಲಿಗೊಡುವೆನು, ಕೊಡದಿರ್ದಡೆ, ಧರೆ ಚಂದ್ರಾರ್ಕರುಳ್ಳನ್ನ ಬರ ಅರಸು ನರಕದಲ್ಲಿಕ್ಕು. ಸೂಕರ ನಾಯಿ ವಾಯಿಸ ಗಾರ್ದಭ ಬಸುರಲ್ಲಿ ಬರಿಸು. ಬರಿಸದಿದಡೆ ನಿಮಗೆ ನಿಮ್ಮಾಣೆ ಸಕಳೇಶ್ವರಾ.