Index   ವಚನ - 45    Search  
 
ಕಾಯದ ಕಳವಳದಲ್ಲಿ ಹುಟ್ಟಿ, ಸಂಸಾರವನೆ ತೊರೆದು, ಲಿಂಗಮುಖವರಿಯದವರೆಲ್ಲಾ ಅಂತಿರಲಿ ಅಂತಿರಲಿ. ಬ್ರಹ್ಮೋಪದೇಶವನೆ ಕೊರಳಲ್ಲಿರಿಸಿಕೊಂಡು, ವಿಷಯಾದಿಗಳ ಕೊಂಡಾತನಂತಿರಲಿ, ಅಂತಿರಲಿ. ಪಂಚಮಹಾವೇದಶಾಸ್ತ್ರವನೋದಿ, ಲಿಂಗವುಂಟು ಇಲ್ಲಾಯೆಂಬ ಶ್ವಾನರಂತಿರಲಿ, ಅಂತಿರಲಿ. ತನುವ ಹೊತ್ತು ತೊಳಲಿ ಬಳಲುವ ಕಾಲವಂಚಕ ಯೋಗಿಗಳೆಲ್ಲಾ ಅಂತಿರಲಿ, ಅಂತಿರಲಿ. ಪಂಚಮಹಾಶೈವರು ಭ್ರಷ್ಟರಾಗಿಹೋದರು. ಎಂತು ಲಿಂಗವಂತಂಗೆ ಸರಿಯೆಂಬೆ? ಅದ್ವೈತಿಗಳೆಲ್ಲಾ ಲಿಂಗಾರಾಧನೆ ಹುಸಿಯೆಂದು, ಬುದ್ಧಿ ತಪ್ಪಿ, ಗಮನಗೆಟ್ಟುಹೋದರು. ಅದೃಶ್ಯಂ ಭಾವನೋ ನಾಸ್ತಿ ದೃಶ್ಯಮೇವ ವಿನಶ್ಯತಿ | ಸದ್ಬ್ರಹ್ಮಂ ತು ನಿರಾಕಾರಂ, ತಥ್ಯಂ ಧ್ಯಾಯಂತಿ ಯೋಗಿನಃ || ಎಂದುದಾಗಿ, ಬ್ರಾಹ್ಮಣನೆಂದಡೆ ಬ್ರಹ್ಮನ ಶಿರವ ದಂಡವ ಕೊಂಡರು. ಬ್ರಹ್ಮವಾದಿಗಳು ಲಿಂಗಕ್ಕೆ ದೂರವಾಗಿ ಹೋದರು. ಅಹಮಿಲ್ಲದ ಕಾರಣ, ಸಕಳೇಶ್ವರದೇವಯ್ಯಾ, ನಿಮ್ಮ ಶರಣರು ಜಗವಂದಯರಾದರು.