ವಚನ - 1563     
 
ಸೀಮೆಯಿಲ್ಲದ ನಿಸ್ಸೀಮೆಯಲ್ಲಿ ಅಡಿಯಿಡುವ ಪರಿ ಎಂತಯ್ಯಾ? ಕ್ರೀ ಇಲ್ಲದ ನಿಃಕ್ರೀಯಲ್ಲಿ ನಿಜವ ಒಡಗೂಡು ಪರಿ ಇನ್ನೆಂತೊ? ಮೊದಲಿಲ್ಲದೆ ಲಾಭ ಉಂಟೆ? ಇದುಕಾರಣ- ತನ್ನ ಹರಿವ ಮನವ ನಿಲ್ಲೆಂದು ನಿಲಿಸಿ, ಜಿಹ್ವೆ ಗುಹ್ಯಾಲಂಪಟವ ಕೆಡಿಸಿ, ಕ್ರಿಯಾ ಜ್ಞಾನ ಸಂಬಂಧವಾದಲ್ಲದೆ ಶರಣರು ಮೆಚ್ಚರು. ಇಂತಿವನರಿಯದೆ ಆಸೆ ಎಂಬ ಹೇಸಿಕೆಯ ಮೇಲೆ ವೇಷವೆಂಬ ಹೆಣನ ಹೊತ್ತು ಹೇಸದೆ ಸತ್ತರಲ್ಲಾ ಹಿರಿಯರು ಗುಹೇಶ್ವರಾ.