Index   ವಚನ - 14    Search  
 
ಅಯ್ಯಾ, ವೈಷ್ಣವರಾದವರು ತಮ್ಮ ವಿಷ್ಣುವ ಬಿಟ್ಟು ಕಳೆದು, ಲಿಂಗಭಕ್ತರಾದರನೇಕರು. ಅಯ್ಯಾ, ಜೈನರಾದವರು ತಮ್ಮ ಜಿನನ ಬಿಟ್ಟು ಕಳೆದು, ಲಿಂಗಭಕ್ತರಾದರನೇಕರು. ಅಯ್ಯಾ, ದ್ವಿಜರಾದವರು ತಮ್ಮ ಕರ್ಮಂಗಳ ಬಿಟ್ಟು ಕಳೆದು, ಲಿಂಗಭಕ್ತರಾದರನೇಕರು. ಲಿಂಗವ ಬಿಟ್ಟು, ಇತರವ ಹಿಡಿದವರುಳ್ಳರೆ ಹೇಳಿರಯ್ಯಾ? ಉಳ್ಳಡೆಯೂ ಅವರು ವ್ರತಗೇಡಿಗಳೆನಿಸಿಕೊಂಬರು. ಇದು ಕಾರಣ, ಋಷಿ ಕೃತಕದಿಂದಲಾದ ಕುಟಿಲದೈವಂಗಳ ದಿಟವೆಂದು ಬಗೆವರೆ, ಬುದ್ಧಿವಂತರು? ಸಟೆಯ ಬಿಡಲಾರದೆ, ದಿಟವ ನಂಬಲಾರದೆ, ನಷ್ಟವಾಗಿ ಹೋಯಿತ್ತೀ ಜಗವು ನೋಡಾ. ಸಕಲದೈವಂಗಳಿಗೆ, ಸಕಲಸಮಯಂಗಳಿಗೆ ನೀವೇ ಘನವಾಗಿ, ನಿಮಗೆ ಶರಣುವೊಕ್ಕೆನಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.