Index   ವಚನ - 28    Search  
 
ಎಲೆ ನಿರೀಶ್ವರವಾದಿಗಳಿರಾ ನೀವು ಕೇಳಿರೆ: ನಿಮ್ಮ ನಿಟಿಲತಟದಲ್ಲಿ ಸಂಚಿತ ಪ್ರಾರಬ್ಧ ಆಗಮಿಯೆಂಬ ಲಿಖಿತವ ಬರೆದವರಾರು? ಕೇಳಿರೆ. ನೀವು ನೀವೇ ಬ್ರಹ್ಮವು, ಬೇರೆ ಈಶ್ವರನಿಲ್ಲೆಂದು ನುಡಿವಿರಿ. ತಪಸ್ಸು ತನ್ನಂತೆ ಊಟ ಮನದಿಚ್ಛೆಯೆಂಬ ಗಾದೆಯ ಮಾತು ನಿಮಗಾಯಿತ್ತು. ಅನ್ನವನುಂಡು, ವ್ಯಸನಕ್ಕೆ ಹರಿದು, ವಿಷಯಂಗಳೆಂಬ ಹಿಡಿಮಲಕ್ಕೆ ಸಿಕ್ಕಿ, ಪಂಚೇಂದ್ರಿಯಂಗಳೆಂಬ ನಾಯಿಗಳಿಚ್ಛೆಗೆ ಹರಿದು, ನಾಯಾಗಿ ಬಗಳಿ, ನಾಯಡೋಣಿಯಲುಂಡು ನಾಯಿಸಾವು ಸಾವ ಅದ್ವೈತಿಗಳಿರಾ, ನಿಮಗೇಕೋ ಬೊಮ್ಮದ ಮಾತು? ಬ್ರಹ್ಮ ವಿಷ್ಣ್ವಾದಿಗಳು ಬ್ರಹ್ಮೋಹಮೆಂದು ಕೆಮ್ಮನೆ ಕೆಟ್ಟು, ಹದ್ದು ಹೆಬ್ಬಂದಿಗಳಾದುದನರಿಯಿರೆ. ಹಮ್ಮಿನಿಂದ ಸನತ್ಕುಮಾರ ಒಂಟಿಯಾದುದನರಿಯಿರೆ. ಕರ್ತನು ಭರ್ತನು ಹರ್ತನು ಶಿವನಲ್ಲದೆ ಬೇರೆ ಕಾವಲ್ಲಿ ಕೊಲುವಲ್ಲಿ ಮತ್ತೊಬ್ಬರುಳ್ಳರೆ ಹೇಳಿರೆ. ಅದೆಂತೆಂದಡೆ: ತ್ವಂ ವಿಶ್ವಕರ್ತಾ ತವ ನಾಸ್ತಿ ಕರ್ತಾ ತ್ವಂ ವಿಶ್ವಭಕ್ತಾ ತನ್ನ ತವ ನಾಸ್ತಿ ಭರಾ | ತ್ವಂ ವಿಶ್ವಹರ್ತಾ ತವ ನಾಸ್ತಿ ಹರ್ತಾ ತ್ವಂ ವಿಶ್ವನಾಥಸ್ತವ ನಾಸ್ತಿ ನಾಥಃ || ಎಂದುದಾಗಿ, ಶಿವನೇ ನಿಮ್ಮನಿಲ್ಲೆಂದು, ಬೊಮ್ಮ ತಾವೆಂಬ ಹಮ್ಮಿನ ಅದ್ವೈತಿಗಳ ಹಿಡಿದು, ಕಾಲನ ಕೈಯಲ್ಲಿ ಕೆಡಹಿ, ಬಾಯಲ್ಲಿ ಹುಡಿಯ ಹೊಯಿಸಿ, ನರಕಾಗ್ನಿಯಲ್ಲಿ ಅಕ್ಷಯಕಾಲವಿರಿಸದೆ ಮಾಣ್ಬನೆ, ನಮ್ಮ ಬಸವಪ್ರಿಯ ಕೂಡಲಚೆನ್ನಸಂಗಮದೇವ.