ಭುವನಸ್ಯ ಪಿತರಂಗರ್ಭೇ ರಾಭೇ ರುದ್ರಂ ಧೀವಾರ್ದಯಾ
ರುದ್ರವು ಉಕಾರ ಬ್ರಹ್ಮಂ ತದೃಷ್ಟಮಜರಂ ಸುಷುಮ್ನ ದ್ರುಗ್ಯವೇಮಕಮಪಿವಾಸಃ||
ಎಂಬ ಶ್ರುತಿಯ ವಿಚಾರಿಸಲರಿಯದೆ, ಒಲಿದಂತೆ ನುಡಿವುತಿಪ್ಪರು ನೋಡಯ್ಯಾ.
`ಮಾತೃದೇವೋ ಭವ, ಪಿತೃದೇವೋ ಭವ'
ಎಂಬ ಶ್ರುತಿ, ದೇವಿ ದೇವನು ತಾಯಿತಂದೆಯೆಂದು ಹೇಳಿತ್ತು.
`ಆಚಾರ್ಯದೇವೋ ಭವ' ಎಂಬ ಶ್ರುತಿ,
ತನಗೆ ಶುದ್ಧಶೈವವನನುಗ್ರಹವ ಮಾಡಿದ ಗುರುವೇ ದೈವವೆಂದು ಹೇಳಿತ್ತು.
`ಅತಿಥಿದೇವೋ ಭವ' ಎಂಬ ಶ್ರುತಿ,
ತನ್ನ ಮನೆಗೆ ಬಂದ ಭಕ್ತನೇ ದೈವವೆಂದು ಹೇಳಿತ್ತು.
ಇದಲ್ಲದೆ ಸಾವುತ್ತ, ಹುಟ್ಟುತ್ತಿಪ್ಪ
ತಂದೆ ತಾಯಿ ದೈವವೆಂದ ಲಜ್ಜೆ ನಾಚಿಕೆ ಬೇಡ.
ಚಂಡೇಶ್ವರಪಿಳ್ಳೆ ಶಿವನು ತಂದೆಯೆಂದರಿದು,
ವಾಯದ ತಂದೆಯ ಕೊಂದುದನರಿಯಾ?
ಎಂದೆಂದಿಗೆ ಕೇಡಿಲ್ಲದ ತಾಯಿತಂದೆ
ಬಸವಪ್ರಿಯ ಕೂಡಲಚೆನ್ನಸಂಗಮದೇವನೆಂದು
ವೇದಂಗಳು ಸಾರುತ್ತವೆ.