Index   ವಚನ - 69    Search  
 
ಮಾಯಾಕೋಳಾಹಳನೆಂಬ ಬಿರುದ ಸೂರೆಗೊಂಡರು ಪ್ರಭುದೇವರು. ಯೋಗಾಂಗವ ಸೂರೆಗೊಂಡರು ಸಿದ್ಧರಾಮೇಶ್ವರದೇವರು. ಭಕ್ತಿಸ್ಥಲವ ಸೂರೆಗೊಂಡು, ನಿತ್ಯಪವಾಡವ ಗೆದ್ದರು ಬಸವೇಶ್ವರದೇವರು. ಷಟ್‍ಸ್ಥಲವ ಸೂರೆಗೊಂಡರು ಚನ್ನಬಸವೇಶ್ವರದೇವರು. ಐಕ್ಯಸ್ಥಲವ ಸೂರೆಗೊಂಡರು ಅಜಗಣ್ಣದೇವರು. ಶರಣಸತಿ ಲಿಂಗಪತಿಯಾದರು ಉರಿಲಿಂಗದೇವರು. ಪ್ರಸಾದಿಸ್ಥಲವ ಸೂರೆಗೊಂಡರು ಬಿಬ್ಬಿಬಾಚಯ್ಯಂಗಳು, ಜ್ಞಾನವ ಸೂರೆಗೊಂಡರು ಚಂದಿಮರಸರು. ನಿರ್ವಾಣವ ಸೂರೆಗೊಂಡರು ನಿಜಗುಣದೇವರು. ಪ್ರಸಾದಕ್ಕೆ ಸತಿಯಾದರು ಅಕ್ಕನಾಗಮ್ಮನವರು. ಉಟ್ಟುದ ತೊರೆದು ಬಟ್ಟಬಯಲಾದರು ಮೋಳಿಗಯ್ಯನ ರಾಣಿಯರು. ಪರಮ ದಾಸೋಹವ ಮಾಡಿ, ಲಿಂಗದಲ್ಲಿ ನಿರವಲಯನೈದಿದರು ನೀಲಲೋಚನೆಯಮ್ಮನವರು. ಪರಮವೈರಾಗ್ಯದಿಂದ ಕಾಮನ ಸುಟ್ಟ ಭಸ್ಮವ ಗುಹ್ಯದಲ್ಲಿ ತೋರಿಸಿ ಮೆರೆದರು ಮಹಾದೇವಿಯಕ್ಕಗಳು. ಗಂಡ ಸಹಿತ ಲಿಂಗದಲ್ಲಿ ಐಕ್ಯವಾದರು ತಂಗಟೂರ ಮಾರಯ್ಯನ ರಾಣಿಯರು. ಇಂತಿವರು ಮುಖ್ಯವಾದ ಏಳುನೂರೆಪ್ಪತ್ತು ಅಮರ ಗಣಂಗಳ ಶ್ರೀಪಾದವ ಅಹೋರಾತ್ರಿಯಲ್ಲಿ ನೆನೆನೆದು ಬದುಕಿದೆನಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.