Index   ವಚನ - 71    Search  
 
ಯುಗಜುಗಂಗಳ ಅಳಿವು ಉಳಿವನರಿಯದೆ, ಹಗಲಿರುಳೆಂಬವ ನೆನಹಿನಲೂ ಅರಿಯದೆ, ಲಿಂಗದಲ್ಲಿ ಪರವಶವಾಗಿರ್ದ ಪರಮಪರಿಣಾಮಿಯನೇನೆಂದುಪಮಿಸುವೆನಯ್ಯಾ? ಆಹಾ! ಎನ್ನ ಮುಕ್ತಿಯ ಮುಕುರದ ಇರವ ನೋಡಾ. ಆಹಾ! ಎನ್ನ ಸತ್ಯದಲ್ಲಿ ಸ್ವಾನುಭಾವದ ಕಳೆಯ ನೋಡಾ. ಆಹಾ! ಅಷ್ಟತನುಗಳ ಪಂಗನಳಿದು, ನಿಬ್ಬೆರಗಾಗಿ ನಿಂದ ಚಿತ್ಸುಖಿಯ ನೋಡಾ. ಬಸವಪ್ರಿಯ ಕೂಡಲಚೆನ್ನಸಂಗಮದೇವಯ್ಯಾ, ಪರಮಪ್ರಸಾದಿ ಮರುಳಶಂಕರದೇವರ ನಿಲವ ಪ್ರಭು ಬಸವಣ್ಣನಿಂದ ಕಂಡು ಬದುಕಿದೆನು, ಬದುಕಿದೆನು.