Index   ವಚನ - 74    Search  
 
ಲಿಂಗ ಮುಂತಾದ ಭಕ್ತನ ಅಂಗದ ಮೇಲಣ ಲಿಂಗ ಹೋಯಿತ್ತೆಂದು ಸಂದೇಹವ ಮಾಡಿ, ಶೈಲ ವಾರಿ ಪಾಶ ಶಸ್ತ್ರ ಸಮಾಧಿ ಎಂಬಿವ ಕೊಳಲಾಗದು. ಅದೆಂತೆಂದಡೆ: ಭಕ್ತಸ್ಯ ಲಿಂಗದೇಹಸ್ಯ ತದ್ದೇಹಂ ಲಿಂಗವರ್ಜಿತಂ | ಶಸ್ತ್ರ ಶೈಲಂ ಜಲಂ ಪಾಶಂ ಸಮಾಧಿಶ್ಚ ವಿವರ್ಜಯೇತ್ || ಎಂದುದಾಗಿ, ಇದಕ್ಕೆ ಮುಕ್ತಿಯನೆಯುವ ಪಥವೆಂತೆಂದಡೆ: ನಿಶ್ಚಿತಂ ನಿರ್ಮಲಂ ಚೈವ ನಿಶ್ಚಲಂ ನಿರುಪಾಧಿಕಂ | ಭುಕ್ತಿಮುಕ್ತಿಪ್ರದಾತಾಹ ಇತ್ಯತ್ವಂ ಶಿವಮಂದಿರಂ || ಎಂದುದಾಗಿ, ಧ್ಯಾನ ಧಾರಣ ಸಮಾಧಿಯಲ್ಲಿಹುದು. ಅದೆಂತೆಂದಡೆ: ತಪೋ ಧ್ಯಾನಾಧಿಕಂ ಕುರ್ವನ್ ರುದ್ರಾಕ್ಷಂ ಧಾರಯನ್ ಸದಾ | ಶಿವಮಂತ್ರಜಪಂ ಶ್ಚೈವ ಶಿವಲೋಕೇ ಮಹೀಯತೇ || ಇಂತೆಂಬ ಶ್ರುತಿಯ ಮೀರಿ, ಅಂಗಕ್ಕೆ ಆಸೆಯ ಮಾಡಿ, ಲಿಂಗವ ಧರಿಸಿ ಪೂಜೆಯ ಮಾಡುವ ಶಿಷ್ಯ ಗುರುದ್ರೋಹಿ. ಹಣವಿಗಾಸೆ ಮಾಡಿ ಲಿಂಗಧಾರಣ ಮಾಡುವ ಗುರು ಶಿವದ್ರೋಹಿ. ಅದೆಂತೆಂದಡೆ: ಲಿಂಗಬಾಹ್ಯಕೃತಂ ದೃಷ್ಟ್ವಾ ಪುನರ್ಲಿಂಗಂತು ಧಾರಯೇತ್ | ಪೂಜಾಯಾ ನಿಷ್ಫಲಾ ಚೈವ ರೌರವಂ ನರಕಂ ವ್ರಜೇತ್ || ಎಂದುದಾಗಿ, ಇಂತು ಇವರಿಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪಾದೋದಕವಿಲ್ಲ, ಪ್ರಸಾದವಿಲ್ಲ, ವಿಭೂತಿ ರುದ್ರಾಕ್ಷಿ ಪ್ರಣವ ಪಂಚಾಕ್ಷರಿ ಇಲ್ಲವಾಗಿ ಸತ್ಪಥಕ್ಕೆ ಸಲ್ಲರು ಕಾಣಿಭೋ. ಇವರು ಕಂಡಕಂಡವರೊಡನೆ ಹರಿವ ಚಾಂಡಾಲಗಿತ್ತಿಯಂತೆ. ಇವಂದಿರ ಮುಖವ ನೋಡಲಾಗದು, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.