Index   ವಚನ - 1570    Search  
 
ಸೃಷ್ಟಿಯ ಮೇಲಣ ಕಣಿಯ ತಂದು, ಅಷ್ಟತನುವಿನ ಕೈಯಲ್ಲಿ ಕೊಟ್ಟು, ಕಟ್ಟಿ ಪೂಜೆಯ ಮಾಡಬೇಕೆಂಬರಯ್ಯಾ. ಅದೆಂತೆಂದಡೆ: ಭೂಮಿಗೆ ಹುಟ್ಟಿ ಶಿಲೆಯಾದ, ಕಲ್ಲುಕುಟಿಕನ ಕೈಯಲ್ಲಿ ರೂಪಾದ, ಗುರುವಿನ ಕೈಯಲ್ಲಿ ಮೂರ್ತಿಯಾದ. ಇಂತೀ ಮೂವರಿಗೆ ಹುಟ್ಟಿದ ಸೂಳೆಯ ಮಗನ ನಾನೇನೆಂದು ಪೂಜೆಯ ಮಾಡಲಿ? ಅದು ಬಿದ್ದಿತ್ತೆಂದು ಸಮಾಧಿಯ ಹೊಕ್ಕಿಹೆನೆಂಬವನು, ಅಸ್ತ್ರ ಸಮಾಧಿ ಜಲಾಂತರ ವನಾಂತರ ದಿಗಂತರದಲ್ಲಿ ಸತ್ತಡೆ ಕುಂಭಿನಿಪಾತಕ ನಾಯಕನರಕ. ಕೈಯ ಲಿಂಗ ಹೋದಡೆ ಮನದ ಲಿಂಗ ಹೋದುದೆ?-ಎಂದು ಎತ್ತಿಕೊಂಡು, ಅಷ್ಟವಿಧಾರ್ಚನೆ ಷೋಡಶೋಪಚಾರ ಮಾಡುವುದೆ ವ್ರತವು. ಇದ ಕಟ್ಟುವ ಭೇದವ, ಮುಟ್ಟುವ ಪಥವ ಚೆನ್ನಬಸವಣ್ಣನೊಬ್ಬನೆ ಬಲ್ಲನಲ್ಲದೆ ಮಿಕ್ಕ ಅಭ್ಯಾಸಕ್ಕೆ ಅಗ್ಘವಣಿಯ ಕೊಟ್ಟು ಪರವನೆಯ್ದಿದೆನೆಂಬ ಲಜ್ಜಗೇಡಿಗಳನೇನೆಂಬೆ ಗುಹೇಶ್ವರಾ.