Index   ವಚನ - 97    Search  
 
ಬ್ರಹ್ಮಾಂಡ ಮಂಡಲದಲ್ಲಿ ಒಬ್ಬ ನಾರಿ ಹುಟ್ಟಿದಳು. ಅವಳಿಗೆ ಐವರು ಗಂಡಂದಿರು, ಮೂವರು ಮಿಂಡಂದಿರು. ಗಂಡಂಗೆ ಕಾಲ ಕೊಟ್ಟು, ಮಿಂಡಂಗೆ ಮಂಡೆಯ ಕೊಟ್ಟು, ಗಂಡಮಿಂಡರ ಒಡಗೂಡಿಕೊಂಡಿಪ್ಪ ನಾರಿಯ ಅಂಗೈಯಲ್ಲಿ ಒಂದು ನಾರಿವಾಳದ ಸಸಿ ಹುಟ್ಚಿತ್ತು. ಅದು ಕಂಗಳ ನೀರ ಕುಡಿದು, ಅಂಗದ ಮರೆಯ ನೆಳಲಲ್ಲಿ ಬಲಿದು, ಸಸಿ ಮರನಾಯಿತ್ತು. ಮರ ಮಹದೊಡಗೂಡಿ ತೆಂಗಿನಕಾಯಿ ಆಕಾಶದಲ್ಲಿ ನಿಂದಿತ್ತು. ಮಟ್ಟೆಯನೊಡೆದು ಕಾಯ ನಿಶ್ಚಯದಲ್ಲಿ ನೋಡಲಾಗಿ, ಕಾಯಿಗೆ ಕಣ್ಣಿಲ್ಲ, ಅಲಿಕಿದಡೆ ಜಲವಿಲ್ಲ. ಅಂಗ ಭಿನ್ನವ ಮಾಡಿ ನೋಡಲಾಗಿ, ಕಾಯ ಕರ್ರಗಾಗಿತ್ತು, ನೀರು ಬೆಳ್ಳಗಾಯಿತ್ತು, ಒಡೆದಾತನ ಬಾಯಿ ಬೆತ್ತಲೆಯಾಯಿತ್ತು. ಬ್ರಹ್ಮಾಂಡಮಂಡಲದ ಶಕ್ತಿ ಗಂಡನ ಕೊಂಡು, ಮಿಂಡನ ವಂಚಿಸಿ, ಬಂಧುಗಳ ಹಿಂಗಿ, ತನ್ನ ಹಿಂಡನೊಡಗೂಡಿದಳು. ಇಂತಿವರೆಲ್ಲರ ಬಲ್ಲತನ ಅವಳಲ್ಲಿಯೇ ಹೋಯಿತ್ತು. ಶಕ್ತಿ ಉಮಾಪತಿ, ನಿಶ್ಶಕ್ತಿ ಪರಮಜ್ಞಾನ. ಕಾಯ ಭ್ರಮೆ, ಜೀವ ಬಯಲು, ಅರಿವು ರೂಪು, ಬಂಕೇಶ್ವರಲಿಂಗವನರಿದನೆಂಬುದು ಸರ್ವಮಾಯೆ.