Index   ವಚನ - 104    Search  
 
ಕಾಯವೆಂಬ ಭೂಮಿಯ ಮೇಲೆ ಆರಂಭವ ಮಾಡುವ ಪರಿ ಎಂತೆಂದಡೆ: ಶಿವನಾಮವೆಂಬ ಕೊಡಲಿಗೆ ನಿತ್ಯವೆಂಬ ಕಾವು, ಕುಟಿಲ ಕುಹಕ ಕ್ಷುದ್ರ ಅಟಮಟವೆಂಬ ಗಿಡವನೆ ಕಡದುಡಿಯನೊಟ್ಟಿ, ಸುಜ್ಞಾನವೆಂಬ ಕಿಡಿಯನೆ ಹಾಕಿ ಸುಟ್ಟು, ಒಂಬತ್ತು ಕಟ್ಟೆಯ ಕಟ್ಟಿ, ನಿಷ್ಠೆಯ ಘಟ್ಟಿಯೆಂಬ ನೇಗಿಲಿಂಗೆ ದೃಢವೆಂಬ ಮುಂಜನ, ಏಕೋಭಾವವೆಂಬ ಈಚಿಂಗೆ ಮೂಹುರಿಯ ಭಾವತ್ರಯದ ಭಾರಣೆಯ ಹಾಸಂ ಹಾಸಿ, ಜೀವಪ್ರಾಣವೆಂಬ ಎತ್ತಂ ಕಟ್ಟಿ, ಮರಹು ತೆರಹೆಂಬ ಕಸಕಾರಿಕೆಯಂ ಹಾಯಿದು, ಹಸಿವು ತೃಷೆಯೆಂಬ ನೇರದ ಕಿಚ್ಚಂ ಕೆಡಿಸಿ, ಪರಿಣಾಮವೆಂಬ ಮಳೆ ಹೊಯ್ಯಲು, ವಿಚಾರವೆಂಬ ಸಸಿ ಹುಟ್ಟಲು, ಅನಾಚಾರವೆಂಬ ಹಕ್ಕಿ ಬಂದು, ಹಕ್ಕಲ ಮಾಡದ ಹಾಂಗೆ ಹರಹರಾಯೆಂಬ ಕವಣೆಯನೆ ಕೊಂಡು, ಎಚ್ಚಿಡುತಿರ್ದೆ ಕಾಣಾ, ಚೆನ್ನಬಂಕೇಶ್ವರಾ. ಈ ಪರಿಯ ಬೆಳಸು, ನಿಮ್ಮ ಶರಣ ಚೆನ್ನಬಸವಣ್ಣಂಗೆ ಸಾಧ್ಯ. ಉಳಿದವರಿಗೆ ಸಾಧ್ಯ ಅಸಾಧ್ಯವೆಂಬುದ ನೀವೆ ಬಲ್ಲಿರಿ.