Index   ವಚನ - 1595    Search  
 
ಹಿಂದಳದನೊಂದು ಮಾಡಿ ಸಂದು ಸಂಶಯವಿಲ್ಲದೆ ನಿಂದ ನೆಲವ ತೋರುವ ಬಸವಣ್ಣನ ಪರಿಯ ನೋಡಾ ಮುಂದಿರ್ದ ಕೂಸಿನ ಸಂದ ಸರ ಒಂದಾಗಿ ಎರಡೊಂದಾದ ಘನಮಹಿಮ ಬಸವಣ್ಣನನೇನೆನ್ನಲಿ? ಮೂರು ಮೂರನೆ ಮಾಡಿ, ಆರು ಆರನೆ ತಂದು, ಬೇರೆ ಮತ್ತಿಲ್ಲದ ಬಸವಣ್ಣನ ಪರಿಯ ನೋಡಾ! ಹತ್ತು ಹತ್ತನೆ ಕೂಡಿ ಧಾತು ಧಾತುವ ಬೆರೆಸಿ ಕಳೆಕಳೆಗಳೊಂದಾದ ಬಸವಣ್ಣನ ಪರಿಯ ನೋಡಾ! ಕೃತಯುಗ ತ್ರೇತಾಯುಗ ದ್ವಾಪರ ಕಲಿಯುಗವಿಲ್ಲದಂದು ಲಿಂಗಸ್ಥಲ ಜಂಗಮಸ್ಥಲ ಪ್ರಸಾದಸ್ಧಲವಿಲ್ಲದಂದು; ಇಂತೀ ತ್ರಿವಿಧವು ಬಸವಣ್ಣನ ಕೈಯಲ್ಲಿ ನಿಕ್ಷೇಪವಯ್ಯಾ! ಅಂದು ಲಿಂಗದಲ್ಲಿ ಅನಿಮಿಷ, ಇಂದು ಜಂಗಮದಲ್ಲಿ ಅನಿಮಿಷ ಬಸವಣ್ಣ ಅಂದಾದ ಗುರುವೆಂದರಿದೆನಾಗಿ ಗುಹೇಶ್ವರಾ ಅಮಳೋಕ್ಯ ಸಂಗನಬಸವಿದೇವನ ಶ್ರೀಪಾದಕ್ಕೆ ಶರಣು ಶರಣು.