ವಚನ - 1606     
 
ಹೆಣ್ಣ ನಂಬಿ ತನು ಮನ ಧನವನಿತ್ತೆಯಲ್ಲಾ ಎಲೆ ಮನವೆ? ಇದ್ದುದನೆಲ್ಲವ ಕೊಂಡು ಬತ್ತಲೆ ಮಾಡಿ ತಲೆಯ ಬೋಳಿಸಿ ಕೈಯಲ್ಲಿ ಹಂಚ ಕೊಟ್ಟು ಮತ್ತೊಬ್ಬಗಾಸೆ ಮಾಡುತ್ತಿದ್ದಾಳೆ ಕಂಡಾ! ಮುಂದೆ ಮನಕೆ ಬಂದ ಪುರುಷನ ನೋಡುವಳು ಕಾಣಾ. ಮತ್ತವಳ ನಂಬಿ ನಚ್ಚು ನಾಚಿಕೆಯಿಲ್ಲದ ಭಂಡ ಮನವೆ! ಹೆಣ್ಣಿನ ಪಾಟಿಯ ತೊರೆದು ಕುಡು ಭಕ್ತ್ಯಂಗನೆಗೆ ತನು ಮನವ ಮುಕ್ತ್ಯಂಗನೆ ನಿನಗೊಲಿವಳು. ಬೇಗ ವಿರಕ್ತನಾಗಿ, ಹೆಣ್ಣ ಜಾಡಿಸಿ, ತಲೆಯ ಬೋಳಿಸಿಕೊಂಡು, ಜಾಡಿಗಂಬಳಿಯ ಮುಸುಕಿಟ್ಟು, ಕರ್ಪರ ಒಂದರೊಳು ದೇಶಾಂತರಿಯಾಗು, ಜಡವತಿಗಳಿಸಿ ಮುಂದೆ ಲಿಂಗವಹೆ ಕಾಣಾ ಗುಹೇಶ್ವರಾ.