Index   ವಚನ - 12    Search  
 
ಅಂತರಂಗದಲ್ಲಿ ಆಸೆ, ಬಹಿರಂಗದಲ್ಲಿ ಕ್ರೋಧ, ಭಾವಕ್ಕೆ ವೇಷ. ಪ್ರಾಣಕ್ಕೆ ರೋಷ, ಕಾಮಕ್ಕೆ ಮದ. ಇಂತಿವನಿಂಬಿಟ್ಟುಕೊಂಡು ನಾವು ಜಂಗಮವೆಂದು ಸುಳಿದರೆ, ಹೇಯವಿಲ್ಲದ ಭಕ್ತರು ವೇಷವ ಕಂಡು ಪೂಜೆಯ ಮಾಡಿದರೆ, ಅಶನಕ್ಕೆ ಅನ್ನವನಿಕ್ಕಿದರೆ, ಶೀತಕ್ಕೆ ರಗಟೆಯ ಕೊಟ್ಟರೆ, ಅವರಿಗದು ಸಹಜ. ನಿಮ್ಮ ನೀವು ನೋಡಲಿಲ್ಲವೆ? ನಾವು ದೇವರಾದೆವೆಂದು ವಿಚಾರಿಸಿ ನೋಡಿ, ಉಭಯವ ಮೆಟ್ಟಿನಿಂದು, ಅಭವನೆಂಬ ಹೆಸರಿಗೆ ಸಂದವರಿಗೆ ಸುಲಭದಿಂದ ಜಗವೆಲ್ಲವು ನಮೋ ನಮೋ ಎಂಬುದು. ಬಸವಪ್ರಿಯ ಕೂಡಲಚೆನ್ನಬಸವಣ್ಣಾ, ಈ ಉಭಯದ ಭೇದವ ನೀವೆ ಬಲ್ಲಿರಿ.