Index   ವಚನ - 15    Search  
 
ಅನ್ನ ಉದಕವ ಕೊಂಡೆಹೆನೆಂದಡೆ ಭೂಮಿಯ ಹಂಗು, ಹೊನ್ನ ಹಿಡಿದೆಹೆನೆಂದಡೆ ಲಕ್ಷ್ಮಿಯ ಹಂಗು. ಹೆಣ್ಣ ಹಿಡಿದೆಹೆನೆಂದಡೆ ಕಾಮನ ಹಂಗು. ಹಾಲ ಕೊಂಡೆಹೆನೆಂದಡೆ ಹಸುವಿನ ಹಂಗು. ಹೂ ಫಲಾದಿಗಳ ಕೊಂಡೆಹೆನೆಂದಡೆ ತರುಮರದ ಹಂಗು. ತರಗೆಲೆಯ ಕೊಂಡೆಹೆನೆಂದಡೆ ವಾಯುವಿನ ಹಂಗು. ಬಯಲಾಪೇಕ್ಷೆಯ ಕೊಂಡೆಹೆನೆಂದಡೆ ಆಕಾಶದ ಹಂಗು. ಇದನರಿದು, ಇವೆಲ್ಲವನು ಕಳೆದು, ವಿಶ್ವಬ್ರಹ್ಮಾಂಡಕ್ಕೆ ನಡೆನುಡಿ ಚೈತನ್ಯವಾದ ಜಂಗಮಲಿಂಗದ ಪಾದವಿಡಿದು, ಅವರು ಬಿಟ್ಟ ಪ್ರಸಾದವ, ಉಟ್ಟ ಮೈಲಿಗೆಯ, ಉಗುಳ ತಾಂಬೂಲವ, ಈ ತ್ರಿವಿಧವ ಕೊಂಡೆನ್ನ ಭವಂ ನಾಸ್ತಿಯಾಯಿತ್ತು. ಮತ್ರ್ಯಲೋಕದ ಮಹಾಗಣಂಗಳು ಸಾಕ್ಷಿಯಾಗಿ, ದೇವಲೋಕದ ದೇವಗಣಂಗಳು ಸಾಕ್ಷಿಯಾಗಿ, ನಾ ನಿಜಮುಕ್ತನಾದೆನಯ್ಯಾ, ನೀವು ಸಾಕ್ಷಿಯಾಗಿ, ಬಸವಪ್ರಿಯ ಕೂಡಲಚೆನ್ನಸಂಗನಬಸವಣ್ಣಾ.