Index   ವಚನ - 39    Search  
 
ಅವಲೋಹವ ಪರುಷ ಮುಟ್ಟಲು ಸುವರ್ಣವಾಗುತ್ತಿದೆ. ಕಬ್ಬಿಣಕ್ಕೆ ಇದ್ದಲಿಯ ಹಾಕಿ ಅಗ್ನಿಯನಿಕ್ಕಿ, ಕಾವುಗೊಳಲಾಗಿ, ಕರಗಿ ನೀರಾಗುತ್ತಿದೆ. ಹಾಲಿಗೆ ನೀರ ಹೊಯ್ದರೆ ಅದು ಏರುವ ಭೇದವನಾರೂ ಅರಿಯರು. ಶರಣರು ತನುವಿಡಿದಿದ್ದರೂ ಇದ್ದವರಲ್ಲ. ಅದು ಹೇಗೆಂದರೆ, ಹಿಂದಣ ದೃಷ್ಟದ ಪರಿಯಲ್ಲಿ ಲಿಂಗವ ಹಿಡಿದಂಗಕ್ಕೆ ಬೇರೊಂದು ಸಂಗಸುಖ ಉಂಟೆ ? ಅದು ಕಾರಣ, ಸರ್ವಾಂಗಲಿಂಗಿಯಾ ಶರಣನು ಮುಟ್ಟಿದ, ತಟ್ಟಿದ, ಕೇಳಿದ, ನೋಡಿದ, ನುಡಿದ, ಸೋಂಕಿದನೆನ್ನಬೇಡ. ಅದು ಕಾರಣ, ಕಬ್ಬಿಣ ನೀರುಂಡಂತೆ ಅರ್ಪಿತವ ಬಲ್ಲ ಐಕ್ಯಂಗೆ ಮೈಯೆಲ್ಲ ಬಾಯಿ. ಇದರ ಬೇದವ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನೆ ಬಲ್ಲ.