Index   ವಚನ - 51    Search  
 
ಆದಿ ಅನಾದಿ ಅಂತ್ಯವೆಂದು ನುಡಿದಾಡುವರಲ್ಲದೆ, ಇವರ ಭೇದಾದಿ ಭೇದವನಾರೂ ಅರಿಯರು. ಆದಿಯಿಂದತ್ತತ್ತಲಾರು ಬಲ್ಲರು? ಅನಾದಿಯಿಂದತ್ತತ್ತಲಾರು ಬಲ್ಲರು? ಸಾಧಕರಿಗಳವಲ್ಲ. ವೇದ, ಶಾಸ್ತ್ರ, ಆಗಮ ಪುರಾಣಂಗಳು ಕಾಣದೆಹೋದವು. ಅದು ಹೇಗೆಂದರೆ, ಆದಿ ಕೂರ್ಮ ಕರಿ ಸರ್ಪ ಹೊತ್ತಿಪ್ಪವೆಂಬರು. ಅವನಾಗುಮಾಡಿ, ಅವಕ್ಕೆ ಆದಿಯಾಗಿಪ್ಪವರಾರೆಂದು ಅರಿಯರು. ಅನಾದಿಯೆಂಬ ಆಕಾಶದ ಮೇಲೆ, ದಿಕ್ಪಾಲಕರು, ದೇವರ್ಕಳು, ರುದ್ರ, ಶಿವ, ಸದಾಶಿವ ಉಂಟೆಂಬರು. ಅವರನಾಗುಮಾಡಿ, ಅವರ ನಿಲಿಸಿಕೊಂಡಿಪ್ಪವರಾರೆಂದು ಅರಿಯರು. ಇಂತೀ ಅಜಾಂಡ ಬ್ರಹ್ಮಾಂಡವೆಲ್ಲವು ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನ [ಕುಕ್ಷಿ]ಯೊಳು ಇಪ್ಪವು ಕಾಣಿರೊ.