ಆಧಾರದ ಕುಂಡಲಿ ಸರ್ಪನ ಮಂಡೆಯ ಮೆಟ್ಟಿ ನಿಲಲು,
ಗಂಡಾಳ ಕಾಲ ಕಾಮ ಇಬ್ಬರು ಹತವಾದರು.
ಅವರ ಹೆಂಡಿರುಗಳು ಮುಂಡಮೋಚಿದರು.
ದಂಡೆಯನೂಡಿದರು, ತೊಂಡಲ ಹರಿದರು.
ತಮ್ಮ ಗಂಡಂದಿರ ಕೂಡೆ ಸಮಾಧಿಯ ಹೊಕ್ಕರು.
ಇದ ಕಂಡು ನಾ ಬೆರಗಾಗಿ ಮುಂದೆ ನೋಡಲು,
ಒಂದೂ ಇಲ್ಲದೆ ಸಂದುಸಂಶಯವಳಿಯಲು,
ಹೊಂದದ ಬಟ್ಟೆಯನೆ ಹೊಂದಿದೆ.
ಬಂದ ಬಟ್ಟೆಯನೊಲ್ಲದೆ ನಿಮ್ಮ
ವೃಂದ ಚರಣದಲ್ಲಿ ವಂದಿದೆನಯ್ಯಾ.
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
ಇದರಂದವನಳಿದು ನೋಡಿದ ಶರಣರೆ ಬಲ್ಲರು.